ಮುಂಬೈ : ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ UAEನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಡೆಯಲಿದೆ. ಕೊರೋನಾ ಹಾವಳಿ ಇಲ್ಲದೇ ಇದ್ದಿದ್ರೆ ಈಗಾಗಲೇ IPL ಮುಗಿದಿರುತ್ತಿತ್ತು. ಲಾಕ್ಡೌನ್ ನಿಂದ ಮುಂದೂಡಲ್ಪಟ್ಟಿದ್ದ ಟೂರ್ನಿ ನಡೆಯುವುದೇ ಅನುಮಾನವಾಗಿತ್ತು. ಕೊನೆಗೂ ಇದೀಗ IPL ನಡೆಯೋದು ಪಕ್ಕಾ ಆಗಿದೆ.
ಆದ್ರೆ, ಚೀನಾ ಭಾರತದ ವಿರುದ್ಧ ಸುಖಾಸುಮ್ಮನೆ ಕ್ಯಾತೆ ತೆಗೆದಿರುವುದರಿಂದ ಚೀನಾ ಮೂಲದ ಕಂಪನಿಗಳಿಗೆ ಪೆಟ್ಟು ಬಿದ್ದಂತಾಗಿದೆ. ಅಂತೆಯೇ ಚೀನಾ ಮೂಲದ VIVO ಕಂಪನಿಗೆ IPL ಪ್ರಾಯೋಜಕತ್ವ ತಪ್ಪಿದೆ. VIVO ಪ್ರಾಯೋಜಕತ್ವ ರದ್ದು ಮಾಡ್ಬೇಕು. ಇಲ್ಲದಿದ್ದರೆ ನಾವು IPLಅನ್ನೇ ಬಹಿಷ್ಕರಿಸುತ್ತೀವಿ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುಮಾಡಿದ್ರು. ಆಗ ಕೂಡಲೇ BCCI VIVO ದ IPL ಟೈಟಲ್ ಪ್ರಾಯೋಜಕತ್ವ ರದ್ದು ಮಾಡಿದೆ.
VIVO ಪ್ರಾಯೋಜಕತ್ವವನ್ನು ರದ್ದು ಮಾಡಿರುವುದರಿಂದ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ ಕರೆದಿದೆ. 4 ತಿಂಗಳ ಅವಧಿಗಾಗಿ ಬಿಡ್ ಆಹ್ವಾನಿಸಿದ್ದು, ಆಗಸ್ಟ್ 14ರೊಳಗೆ ಪ್ರಾಯೋಜಕತ್ವ ನೀಡಲು ಮುಂದಾಗಿರುವ ಕಂಪನಿಗಳು ಮಾಹಿತಿ ನೀಡಬೇಕು. ಅಂತಿಮವಾಗಿ ಯಾರು ಬಿಡ್ ಪಡೆದಿದ್ದಾರೆ ಅನ್ನುವುದನ್ನು ಬಿಸಿಸಿಐ ಆಗಸ್ಟ್ 18ಕ್ಕೆ ಘೋಷಿಸಲಿದೆ.
ಬೈಜುಸ್, ಕೋಕಾಕೋಲಾ, ಜಿಯೋ, ಅಮೆಜಾನ್, ಫೋನ್ ಪೇ , ಅನ್ ಅಕಾಡೆಮಿ ಮತ್ತು ಪತಂಜಲಿ ನಡುವೆ ಸ್ಪರ್ಧೆ ಇದೆ ಎನ್ನಲಾಗಿದೆ.