Monday, January 20, 2025

ನಕಲಿ ಸಹಿ ಮಾಡಿ 19.50 ಲಕ್ಷ ಹಣ ಗುಳುಂ ಮಾಡಿದ ಬ್ಯಾಂಕ್ ಮ್ಯಾನೇಜರ್..!

ಹಾಸನ : ನಕಲಿ ಸಹಿ ಹಾಕಿ ಬ್ಯಾಂಕ್‍ನಿಂದ 19.50 ಲಕ್ಷರೂ ನಗದು ವಂಚಿಸಿರುವ ಘಟನೆ ತಾಲೂಕಿನ ಬುಸ್ತೇನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಬಿ.ಬಿ. ಧನರಾಜ್ ಎಂಬುವವರು ಅದೇ ಗ್ರಾಮದ ಸರ್ವೆ ನಂಬರ್ 22/6 ರಲ್ಲಿ ಜಮೀನು ಹೊಂದಿದ್ದರು. 2007 ನೇ ಸಾಲಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ಸರ್ಕಾರಕ್ಕೆ ಜಮೀನು ವಶಪಡಿಸಿಕೊಂಡು ಸದರಿ ಜಮೀನಿನ ಹಣ 19.50 ಲಕ್ಷ ರೂ. ಹಣವನ್ನು ಕಾರ್ಪೋರೇಷನ್ ಬ್ಯಾಂಕ್‍ಗೆ ಚೆಕ್ ಮೂಲಕ ನೀಡಿದ್ದರು. ಧನರಾಜ್ ತನ್ನ ಸಹೋದರನ ಹೆಸರಿನಲ್ಲಿ ಜಂಟಿಯಾಗಿ ನಗರದ ವಿದ್ಯಾನಗರದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‍ನಲ್ಲಿ ನಿಗದಿತ ಠೇವಣಿ ಇಟ್ಟಿದ್ದರು. ಇತ್ತೀಚಿಗೆ ಮನೆ ನಿರ್ಮಿಸುವ ಸಲುವಾಗಿ ಕಳೆದ ಜು.27 ರಂದು ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಲು ಹೋದಾಗ ಬ್ಯಾಂಕ್ ಮ್ಯಾನೇಜರ್ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ತಿಳಿಸಿದ್ದಾರೆ. ಪರಿಶೀಲನೆ ನಂತರ ಧನರಾಜ್ ಅವರ ತಂದೆ ಬೊಮ್ಮೇಗೌಡ ಎಂಬುವವರ 2ನೇ ಪತ್ನಿ ಸತ್ಯವತಿ ಮತ್ತು ಬ್ಯಾಂಕ್ ಮ್ಯಾನೇಜರ್ ಸೇರಿಕೊಂಡು ನಕಲು ಸಹಿ ಹಾಕಿ ಖಾತೆಯಲ್ಲಿದ್ದ 19.50 ಲಕ್ಷ ರೂ.ವನ್ನು ಡ್ರಾ ಮಾಡಿರುವುದು ಪತ್ತೆಯಾಗಿದೆ. ನಂತರ ಬೊಮ್ಮೇಗೌಡ ಮೊದಲಾದವರು ಹಣ ಕೇಳಲು ಹೋದಾಗ ಸತ್ಯವತಿ ಎಂಬಾಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ ಕೊಡುವುದಿಲ್ಲ ಎಂದು ಮನೆಯಿಂದ ಹೊರಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಧನರಾಜ್ ಅವರು ಆ.9 ರಂದು ನೀಡಿದ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರತಾಪ್ ಹಿರೀಸಾವೆ

RELATED ARTICLES

Related Articles

TRENDING ARTICLES