ಚಿತ್ರದುರ್ಗ: ಜಿಲ್ಲೆಯ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ದೋರಣೆಯನ್ನು ವಿರೋಧಿಸಿ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಹಾಗು ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪಾದಯಾತ್ರೆಯಲ್ಲಿ ಶಾಸಕ ಹಾಗೂ ಗ್ರಾಮಸ್ಥರನ್ನ ಚಿತ್ರದುರ್ಗ ಪೋಲಿಸರು ಬಂಧಿಸಿದ್ದಾರೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲು ಈ ಹಿಂದೆ ರಾಜ್ಯಸರ್ಕಾರ ಆದೇಶ ಹೊರಡಿಸಿತ್ತು. ಈ ಕುರಿತು ಶಾಸಕ ಟಿ. ರಘುಮೂರ್ತಿ ಹಾಗೂ ಗ್ರಾಮಸ್ಥರು ಕಳೆದ ನಾಲ್ಕು ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡಿದ್ದರು. ಅದ್ರೆ ಪ್ರತಿಭಟನೆಗೆ ಮಣಿಯದ ಸರ್ಕಾರದ ವಿರುದ್ದ ಇಂದು ತುರುವನೂರಿನಿಂದ ಶಾಸಕರು, ವಿವಿಧ ಮಠಾಧೀಶರು, ಕನ್ನಡಪರ ಸಂಘಟನೆಗಳು, ಗ್ರಾಮಸ್ಥರು ಸೇರಿದಂತೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ತುರುವನೂರು ಗ್ರಾಮದ ಸ್ವಾತಂತ್ರ್ಯ ಹೋರಾಟದ ಸ್ಮಾರಕ ಮಹಾತ್ಮ ಗಾಂಧಿ ಆವರಣದಿಂದ ಪಾದಯಾತ್ರೆಗೆ ವಿವಿಧ ಮಠಾಧೀಶರು ಚಾಲನೆ ನೀಡಿದ್ದರು. ಪಾದಯಾತ್ರೆ ಆರಂಭದಲ್ಲೇ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಹೊಸದುರ್ಗ ಬಿ.ಜಿ. ಗೋವಿಂದಪ್ಪ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಬಂಧನವಾಗಿದ್ದು, ಬೆಂಗಳೂರು ಚಲೋ ಹೊರಟಿದ್ದವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.