ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ದೇಶದ ಅತೀ ದೊಡ್ಡ ಗೋ ಶಾಲಾ ಕಟ್ಟಡಕ್ಕೆ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಪುತ್ತೂರು ತಾಲ್ಲೂಕಿನ ಮುಂಡೂರಿನ ಸಾಂದೀಪನಿಯಲ್ಲಿ ಬೃಹತ್ ಕಾಂಪೌಂಡ್ವೊಂದು ಗೋ ಶಾಲೆ ಮೇಲೆ ಉರುಳಿ ಬಿದ್ದಿದೆ. ನಾಲ್ಕು ಮಹಡಿಯ ಗೋ ಶಾಲೆ ಇದಾಗಿದ್ದು, ತಡೆಗೋಡೆ ಕುಸಿದ ಪರಿಣಾಮ ಭಾರೀ ಪ್ರಮಾಣದ ಹಾನಿಯಾಗಿದೆ. ಮಾತ್ರವಲ್ಲದೇ ಪಕ್ಕದಲ್ಲಿಯೇ ಇರೋ ಗೋ ಶಾಲೆ ಮಾಲೀಕ ಭಾಸ್ಕರ್ ಆಚಾರ್ ಮನೆಗೂ ಕಂಪೌಂಡ್ ಕುಸಿತದಿಂದ ಭಾರೀ ಹಾನಿಯಾಗಿದೆ. ಗೋ ಶಾಲೆಯ ಸುರಕ್ಷತೆ ದೃಷ್ಟಿಯಿಂದ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಪೌಂಡ್ನ್ನು ನಿರ್ಮಿಸಲಾಗಿತ್ತು. ಗೋವುಗಳಿಗಾಗಿ ನಾಲ್ಕು ಮಹಡಿಯ ಗೋಶಾಲೆ ಕಟ್ಟಿಸಿರುವ ಭಾಸ್ಕರ್ ಆಚಾರ್ ಅದರ ಪಕ್ಕದಲ್ಲಿಯೇ ಹೆಂಚಿನ ಮನೆ ಮಾಡಿಕೊಂಡಿದ್ದಾರೆ. ಸದ್ಯ ನೂರಾರು ಹಸು, ಕರುಗಳು ಗೋ ಶಾಲೆಯಲ್ಲಿದ್ದು ಅವುಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಅನ್ನೋದು ಸಮಾಧಾನದ ಸಂಗತಿ.
-ಇರ್ಷಾದ್ ಕಿನ್ನಿಗೋಳಿ