ಚಿಕ್ಕಮಗಳೂರು : ಕಳೆದ ಮೂರು ದಿನಗಳಿಂದ ಒಂದು ಕ್ಷಣವೂ ಬಿಡುವು ನೀಡದ ಹಾಗೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ವರುಣನ ರೌದ್ರ ನರ್ತನ ಮುಂದುವರೆಯುತ್ತಲೇ ಇದೆ. ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಭಾಗದಲ್ಲಿ ಹಲವಾರು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ದೇವಸ್ಥಾನದ ಸಮೀಪ ಗುಡ್ಡ ಕುಸಿತ ಉಂಟಾಗಿದೆ. ಈ ಗುಡ್ಡ ಕುಸಿತದಿಂದ ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದು, ಈ ಮಳೆ ಭಾರಿ ಅನಾಹುತ ಮಾಡುವ ಮುನ್ಸೂಚನೆ ನೀಡುತ್ತಿದೆ. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ದುರ್ಗದ ಹಳ್ಳಿಯಲ್ಲಿ ನೂರಾರು ಎಕರೆ ಕಾಫಿ ತೋಟ, ಹಾಗೂ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದವು. ಈ ವರ್ಷವೂ ಅದೇ ರೀತಿಯ ಲಕ್ಷಣ ಗೋಚರವಾಗುತ್ತಿದ್ದು, ದುರ್ಗದ ಹಳ್ಳಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ, ಗುಡ್ಡದ ಮಣ್ಣು ರಸ್ತೆಯ ಮೇಲೆ ಬಂದು ಅಪ್ಪಳಿಸಿ ಬಿದ್ದಿದೆ. ಈ ರಸ್ತೆಯಲ್ಲಿ ವಾಹನ ಸಂಚಾರದ ಅಸ್ತವ್ಯಸ್ತವಾಗಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ಈ ಭಾಗದ ಜನರು ಕಂಗಾಲಾಗಿ ಹೋಗಿದ್ದಾರೆ….
ಸಚಿನ್ ಶೆಟ್ಟಿ ಚಿಕ್ಕಮಗಳೂರು..