ಮೈಸೂರು : ಕೊರೋನಾ ಮಹಾಮಾರಿ ಶಿಕ್ಷಣ ಕ್ಷೇತ್ರಕ್ಕೆ ತೀವ್ರ ಡ್ಯಾಮೇಜ್ ಮಾಡಿದೆ. ಶಾಲಾ ಕಾಲೇಜುಗಳು ಪ್ರಾರಂಭವಾಗುವ ಸೂಚನೆಗಳು ಸಧ್ಯಕ್ಕೆ ಕಾಣುತ್ತಿಲ್ಲ. ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಶಿಕ್ಷಕರೊಬ್ಬರು ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡುವ ಮೂಲಕ ನೆರವಾಗುತ್ತಿದ್ದಾರೆ.
ಕೊರೋನಾ ಹಿನ್ನಲೆ ಶಿಕ್ಷಣದಿಂದ ದೂರ ಉಳಿದ ಮಕ್ಕಳಿಗೆ ಮನೆಯಲ್ಲೇ ಪಾಠ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮನೆ ಮುಂದಿನ ಜಗುಲಿಯೇ ಮಕ್ಕಳಿಗೆ ಶಾಲೆಯಾಗಿದೆ. ಟಿ.ನರಸೀಪುರ ತುಂಬಲ ಗ್ರಾಮದ ರಾಯಪ್ಪರವರೇ ಇಂತಹ ಸಾಮಾಜಿಕ ಕಳಕಳಿ ಮೆರೆದ ಮಾದರಿ ಶಿಕ್ಷಕರಾಗಿದ್ದಾರೆ.
ತುಂಬಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ರಾಯಪ್ಪ
ಮಕ್ಕಳ ಭವಿಷ್ಯದ ಬಗ್ಗೆ ಆಸಕ್ತಿ ವಹಿಸಿರುವುದು ಉತ್ತಮ ಕಾರ್ಯವಾಗಿದೆ. ಗ್ರಾಮದ
ಬೀದಿ ಬೀದಿಗೆ ಭೇಟಿ ನೀಡಿ ಮನೆಗಳ ಮುಂದೆ ಕುಳಿತು ಪಾಠ ಹೇಳುತ್ತಾರೆ. ಪಾಠಗಳು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆ ಕಲಿಕೆಗೂ ಒತ್ತು ನೀಡುತ್ತಾರೆ. ಮಕ್ಕಳೂ ಸಹ ರಾಯಪ್ಪನವರ ಕಾಳಜಿಗೆ ಕೈ ಜೋಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ರಾಯಪ್ಪ ಪಾಠ ಮಾಡುತ್ತಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ದುಡಿಯಲು ಮಾರ್ಗದರ್ಶನ ನೀಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸ್ವಾವಲಂಬಿ ಜೀವನ ನಡೆಸುವ ವಿಚಾರದಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಪೇಪರ್ ಬ್ಯಾಗ್ ಮಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ. ಗ್ರಾಮದ ಜನರ ಹಾಗೂ ಪೋಷಕರ ಮನಗೆದ್ದ ರಾಯಪ್ಪ ಮಾದರಿ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಇಂತಹ ಶಿಕ್ಷಕರಿದ್ದರೆ ಕೊರೋನಾ ಹೊಡೆತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಕಾಡುವುದಿಲ್ಲ..
ಕೊರೋನಾ ಮಹಾಮಾರಿ ಎಫೆಕ್ಟ್.. ವಿದ್ಯಾರ್ಥಿಗಳ ಮನೆಗೇ ತೆರಳಿ ಶಿಕ್ಷಕನ ಟೀಚಿಂಗ್..
TRENDING ARTICLES