ಉಡುಪಿ : ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಉಡುಪಿಯಲ್ಲಿ ಶ್ರೀರಾಮನಿಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಗಳು ಲಕ್ಷ ತುಳಸಿ ಅರ್ಚನೆ ಸಲ್ಲಿಸಿ ಪ್ರಾರ್ಥಿಸಿದರು. ಚಾತುರ್ಮಾಸ್ಯ ನಿಮಿತ್ತ, ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆಗೆ ತೆರಳದೇ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿ ಗೋಶಾಲೆಯ ಆವರಣದ ಶಾಖಾ ಮಠದಲ್ಲಿ ನವಗ್ರಹ ಯಾಗ, ಬಳಿತ್ಥಾ ಸೂಕ್ತ ಹೋಮ, ರಾಮತಾರಕ ಮಂತ್ರ ಯಾಗವನ್ನು ವೈದಿಕರ ಮೂಲಕ ನೆರವೇರಿಸಿದರು. ಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರಿಗೆ ಲಕ್ಷೋಪಲಕ್ಷ ತುಳಸೀ ಅರ್ಚನೆಯನ್ನು ವಿಪ್ರರ ವಿಷ್ಣು ಸಹಸ್ರನಾಮಾವಳಿ ಪಠನ ಸಹಿತ ನೆರವೇರಿಸಿದರು. ಬಳಿಕ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಪಟ್ಟದ ದೇವರ ಮಂಟಪದ ಕೆಳಭಾಗದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನಿಟ್ಟು ತುಳಸೀ ಅರ್ಪಿಸಿ ಗುರುಗಳಿಗೂ ಮಂಗಳಾರತಿ ಬೆಳಗಿ ಗೌರವ ಅರ್ಪಿಸಿದರು. ಬಳಿಕ ಗೋವುಗಳಿಗೆ ಗೋಗ್ರಾಸ ಸಮರ್ಪಣೆಯನ್ನೂ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಬಳಿಕ ಅಯೋಧ್ಯೆಯ ಕಾರ್ಯಕ್ರಮವನ್ನು ಶ್ರೀಗಳು ದೂರದರ್ಶನ ನೇರ ಪ್ರಸಾರದ ಮೂಲಕ ವೀಕ್ಷಿಸಿ ಸಂತೋಷಪಟ್ಟರು. ಬಳಿಕ ಭಕ್ತಾದಿಗಳಿಗೆ ಅನ್ನಾರಾಧನೆ ನಡೆಯಿತು.