ಶಿವಮೊಗ್ಗ: ಪ್ರಾಚೀನ ಕಾಲದಲ್ಲಿ ನಮ್ಮನ್ನು ಅನೇಕ ರಾಜ, ಮಹಾರಾಜರು ಆಳುತ್ತಿದ್ದರು ಎನ್ನುವುದಕ್ಕೆ ಅನೇಕ ಕುರುಹುಗಳು ಆಗಿಂದಾಗ್ಗೆ ಪತ್ತೆಯಾಗುತ್ತಲೇ ಇರುತ್ತವೆ. ಇತಿಹಾಸದ ಪುಟಗಳಲ್ಲಿ ಸೇರಿರುವ ಅನೇಕ ವೀರರು, ರಾಜ-ಮಹಾರಾಜರು, ಆಡಳಿತ ನಡೆಸುತ್ತಿದ್ದರು ಎಂಬುದಕ್ಕೆ ಉಲ್ಲೇಖಗಳಿದ್ದು, ಆಗ್ಗಾಗ್ಗೆ ಇದಕ್ಕೆ ಪುಷ್ಠಿ ನೀಡುವಂತೆ ನಿದರ್ಶನಗಳು ನಮ್ಮ ಕಣ್ಮುಂದೆ ಬಂದು ನಿಲ್ಲುತ್ತವೆ. ಅಂತಹದರಲ್ಲೀಗ, ಕೆಳದಿ ಮಲ್ಲಮ್ಮಾಜಿ ಶಾಸನ ಪತ್ತೆಯಾಗಿದ್ದು, ಇದು ಕೂಡ ಇತಿಹಾಸದ ಪುಟಗಳನ್ನು ಜೀವಂತವಾಗಿರಿಸುವಂತೆ ಮಾಡಿದೆ. ಅಂದಹಾಗೆ, ಶಿವಮೊಗ್ಗ ಜಿಲ್ಲೆಯ ಕುಂಚಿಗನಾಳು ತಾಂಡದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖಾಧಿಕಾರಿಗಳು ಕ್ಷೇತ್ರ ಕಾರ್ಯಕೈಗೊಂಡ ವೇಳೆ, ಗ್ರಾಮದ ಹಾಳೂರು ಎಂಬಲ್ಲಿ, ಲಿಂಗಮುದ್ರೆ ಕಲ್ಲಿನ ಶಾಸನ ಪತ್ತೆಯಾಗಿದೆ.
ಅಷ್ಟಕ್ಕೂ ಈ ಲಿಂಗಮುದ್ರೆ ಕಲ್ಲು, ಪ್ರಾಚೀನ ಕಾಲದಲ್ಲಿ ಗಡಿಯನ್ನು ಗುರುತಿಸಲು ಬಳಸುತ್ತಿದ್ದರಂತೆ. ಬೆಟ್ಟ, ಗುಡ್ಡ, ನದಿ, ಹಳ್ಳ, ವೃಕ್ಷಗಳಾದ ವಟ ವೃಕ್ಷ. ಹುಣಸೆಮರ ಮೊದಲಾದವುಗಳ ಮುಖಾಂತರ ಗಡಿಗಳನ್ನು ಗುರುತಿಸುತ್ತಿದ್ದರು. ನಂತರ ಇವುಗಳ ಜೊತೆಯಲ್ಲಿಯೇ ಕಲ್ಲುಗಳನ್ನು ಗಡಿಕಲ್ಲುಗಳಾಗಿ ನಿಲ್ಲಿಸುತ್ತಾ , ಸೀಮೆ , ಊರು ಹಾಗೂ ದಾನವಾಗಿ ನೀಡಿದ ಭೂಮಿಗೆ ಗಡಿಕಲ್ಲುಗಳನ್ನು ಧರ್ಮಧಾರಿತವಾಗಿ ನಿಲ್ಲಿಸುತ್ತಾ ಬಂದರಂತೆ. ಇಲ್ಲಿ ಪ್ರಮುಖವಾಗಿ ಜೈನರು ಮುಕ್ಕೊಡ ಕಲ್ಲನ್ನು , ವೈಷ್ಣವರು ಚಕ್ರಕಲ್ಲು , ಶಂಕ ಚಕ್ರದಕಲ್ಲು , ವಾಮನ ಮುದ್ರೆಯ ಕಲ್ಲನ್ನು , ಶೈವರು ನಂದಿಕಲ್ಲು, ತ್ರಿಶೂಲದ ಕಲ್ಲು ಹಾಗೂ ಲಿಂಗಮುದ್ರೆ ಕಲ್ಲನ್ನು ನಿಲ್ಲಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.
ರಾಣಿ ಮಲ್ಲಮಾಜಿ. ಇವರು ಭದ್ರಪ್ಪನಾಯಕನಿಗೆ ಒಳ್ಳೆಯದಾಗಲಿ ಎಂದು ಭದ್ರರಾಜಪುರವನ್ನು ಮಾಡಿ ಕ್ರಿ.ಶ. 1661-62 ರ ಕ್ರಿ.ಶ. 17 ನೇ ಶತಮಾನದಲ್ಲಿ ದಾನ ನೀಡಿದ್ದು, ಇದನ್ನು ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ನದಿ ತೀರದ ಭದ್ರರಾಜಪುರ ಎಂದು ಕರೆಯಲಾಗುತ್ತದೆ. ಇದು ಅಗ್ರಹಾರವಾಗಿರುವುದು ಕಂಡುಬರುತ್ತದೆ . ಶೈವ ಧರ್ಮದವರು ದಾನ ನೀಡಿದರೆ ಲಿಂಗಮುದ್ರೆ ಕಲ್ಲನ್ನು ದಾನದ ಹಾಗೂ ಗಡಿಕಲ್ಲಿನ ಸಂಕೇತವಾಗಿ ನಿಲ್ಲಿಸುತ್ತಿದ್ದರು . ಇಂತಹ ಲಿಂಗಮುದ್ರೆಯ ಶಾಸನದ ಕಲ್ಲನ್ನು ಇಲ್ಲಿ ನಿಲ್ಲಿಸಿರುವುದು ವಿಷೇಷವಾಗಿದೆ .
ದಾನ ನೀಡಿರುವ ಭೂಮಿಯ ಗಡಿಕಲ್ಲಾಗಿ ಶಾಸನವಿರುವ ಲಿಂಗಮುದ್ರೆಯ ಕಲ್ಲನ್ನು ನಿಲ್ಲಿಸಿ, ಇದರಲ್ಲಿ ದಾನ ನೀಡಿರುವ ವಿವರವನ್ನು ಶಾಸನ ರೂಪದಲ್ಲಿ ಬರೆಯಿಸಿ , ಇದರ ಮೇಲೆ ಶಿವಲಿಂಗ ಹಾಗೂ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ. ಈ ಶಿಲ್ಪಗಳ ಆಧಾರದ ಮೇಲೆ ಇದನ್ನು ಲಿಂಗಮುದ್ರೆಕಲ್ಲು ಎಂದು ಕರೆಯಲಾಗಿದೆ. ಇಲ್ಲಿ ಪ್ರಮುಖವಾಗಿ ಶೈವ ಧರ್ಮದವರು ದಾನ ನೀಡುವಾಗ ಲಿಂಗಮುದ್ರೆ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು ಎಂದು ತಿಳಿಯಬಹುದಾಗಿದೆ. ಅಷ್ಟಕ್ಕೂ ಈ ಶಾಸನವು ಲಿಂಗಮುದ್ರೆಯ ಕಲ್ಲಿನ ಮೇಲಿದ್ದು, 5 ಸಾಲಿನಿಂದ ಕೂಡಿದ್ದು, 60 ಸೆಂ.ಮೀ ಉದ್ದ, 35 ಸೆಂ.ಮೀ ಅಗಲವಾಗಿದೆ.