ಹಾಸನ : ಜನಸಾಮಾನ್ಯರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೆನೆಂದು ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ತಿಳಿಸಿದರು.
ತಾಲೂಕಿನ ಪಾಳ್ಯ ಹೋಬಳಿ ನಿಡನೂರು ಗ್ರಾಮದ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಪಿಎಂ ಆರ್ ಜಿ ಸಿ ಯೋಜನೆಯಡಿಯಲ್ಲಿ ಸುಮಾರು 200 ಕೋಟಿ ಹಣ ಮಂಜೂರಾಗಿದ್ದು ಮಲೆನಾಡು ಭಾಗದ ಆಲೂರು ಸಕಲೇಶಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ರಸ್ತೆಗಳು ತುಂಬಾ ಹಾಳಾಗಿರುವುದನ್ನ ಗಮನದಲ್ಲಿಟ್ಟುಕೊಂಡು ನಾಲ್ಕು ಬ್ಯಾಚ್ ಗಳಲ್ಲಿ ನಿಡನೂರಿನಿಂದ ಅಬ್ಬನ ಜೋಡಿ ಹೊನ್ನವಳ್ಳಿ ಮಾರ್ಗ ರಸ್ತೆ, ಕಣತೂರಿನಿಂದ ಮರಡೂರು ಮಾರ್ಗವಾಗಿ ಗುಂಡನ ಬೆಳ್ಳೂರಿಗೆ ರಸ್ತೆ ದುರಸ್ತಿ, ಆಲೂರು ಬಿಕ್ಕೋಡು ರಸ್ತೆಯಿಂದ ಚಿಕ್ಕಲ್ ಹೊಸಳ್ಳಿ ವರೆಗೆ ರಸ್ತೆ ದುರಸ್ತಿ ಹಾಗೂ ಮಗ್ಗೆ ರಾಯರು ಕೊಪ್ಪಲಿನಿಂದ ಕುಡಿದಲೇ ಮಾರ್ಗವಾಗಿ ಕಾಡ್ಲೂರು ಕೊಡುಗೆಯವರೆಗೆ ರಸ್ತೆ ದುರಸ್ತಿಗೊಳಿಸಲು ಸುಮಾರು 30 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನ ಕೈಗೆತ್ತಿಕೊಂಡು ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆದಾರರಿಗೆ ವಹಿಸಿಕೊಡಲಾಗಿದೆ. ಕಾಮಗಾರಿ ಪಡೆದ ಗುತ್ತಿಗೆದಾರರು ಯಾವುದೇ ಲೋಪ ಬರದಂತೆ ಕಾಮಗಾರಿ ಮುಗಿಸಿ ಕೊಡಬೇಕು. ಜನಸಾಮಾನ್ಯರು ಕೂಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ನೀಡಬೇಕು, ಆಲೂರು ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ನಾನು ಸಂಸದನಾದ ನಂತರ ಮೊದಲ ಬಾರಿಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದೇನೆ ಮುಂದಿನ ಲೋಕಸಭೆ ಅಧಿವೇಶನದಲ್ಲಿ ಆನೆ ಕಾರಿಡಾರ್ ಹಾಗೂ ಅರಣ್ಯ ಅಗಲೀಕರಣದ ಬಗ್ಗೆ ಮಾತನಾಡಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರಲ್ಲದೆ ಹೆಚ್ಚು ಕೆಲಸ ಮಾಡಲು ನಿಮ್ಮಗಳ ಶಕ್ತಿ ಅತಿ ಮುಖ್ಯ ಆದ್ದರಿಂದ ತಾವುಗಳು ಸಂಪೂರ್ಣವಾಗಿ ನಮ್ಮನ್ನು ಬೆಂಬಲಿಸಿ ಮುನ್ನಡೆಸಬೇಕು ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಹಾಳಾಗಿದ್ದ ರಸ್ತೆಗಳನ್ನು ಸಂಸದರು ಗುರುತಿಸಿ ಅಭಿವೃದ್ಧಿ ಪಡಿಸುತ್ತಿರುವುದು ಸಂತೋಷದ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಾರ್ಯನಿರ್ವಹಿಸಲು ಸಂಸದರು ಹಾಗೂ ನಮಗೆ ಹೆಚ್ಚು ಶಕ್ತಿ ನೀಡಬೇಕು ಎಂದರು. ಜೆಡಿಎಸ್ ಅಧ್ಯಕ್ಷ ಕೆಎಸ್ ಮಂಜೇಗೌಡ ಮಾತನಾಡಿ ಎತ್ತಿನಹೊಳೆ ಯೋಜನೆ ಇಲಾಖೆ ವತಿಯಿಂದ ಆಳವಾಗಿ ಕಾಲುವೆ ತೋಡಿರುವುದರಿಂದ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸಂಸದರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ವಿ. ಲಿಂಗರಾಜು, ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಎಲ್ ಲಿಂಗರಾಜು, ಜೆಡಿಎಸ್ ಮುಖಂಡರಾದ ಜಯಪ್ಪ ಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ, ಪಾಳ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರತಾಪ್ ಹಿರೀಸಾವೆ ಪವರ್ ಟಿವಿ ಹಾಸನ