ಹಾಸನ : ಖಾಸಗೀ ಫ್ಯಾಕ್ಟರಿ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಸೋಂಕಿತ ನೌಕರರಿಗೆ ಸೂಕ್ತ ಚಿಕಿತ್ಸೆಯಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಟ ಬೆಡ್ ಸೌಲಭ್ಯವಿಲ್ಲದೇ ನೆಲದಲ್ಲಿಯೇ ಸೊಂಕಿತರು ಮಲಗುತ್ತಿದ್ದು, ಕೊರೊನಾ ಚಿಕಿತ್ಸೆಗಾಗಿ ಜಿಲ್ಲಾಡಳಿತಕ್ಕೆ ಮೊರೆಯಿಡುತ್ತಿದ್ದಾರೆ. ಇತ್ತ ದಿನೇದಿನೇ ಹಾಸನ ಜಿಲ್ಲೆಯಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 131 ಹೊಸ ಕೇಸ್ ಪತ್ತೆಯಾಗಿದ್ದು, ಐವರನ್ನು ಡೆಡ್ಲಿ ವೈರಸ್ ಬಲಿಪಡೆದುಕೊಂಡಿದೆ.
ಬೆಡ್ ಸಿಗದೇ ನೆಲದ ಮೇಲೆಯೇ ಮಲಗಿರೋ ಪಾಸಿಟಿವ್ ಕಾರ್ಮಿಕರು, ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡ್ತಿರೋ ಸೊಂಕಿತರು, ಫ್ಯಾಕ್ಟರಿಯ 130 ಮಂದಿಗೆ ಕೊರೊನಾ ಬಂದರೂ ಕ್ಯಾರೆ ಎನ್ನದೇ ಇರೋ ಆಡಳಿತ ಮಂಡಳಿ… ಈ ಘಟನೆ ನಡೆದಿರೋದು ಹಾಸನ ನಗರದ ಹೊರವಲಯದಲ್ಲಿರೋ ಹಿಮತ್ ಸಿಂಕಾ ಫ್ಯಾಕ್ಟರಿಯಲ್ಲಿ.. ಫ್ಯಾಕ್ಟರಿಯಲ್ಲಿ ಕೆಲಸ ಮಾಡೋ 130 ಕ್ಕೂ ಹೆಚ್ಚು ಮಂದಿಗೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಪಾಸಿಟಿವ್ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಆರಂಭಿಕವಾಗಿ 450 ಮಂದಿಗೆ ಪರೀಕ್ಷೆ ನಡೆಸಿದ್ದು, ಇದ್ರಲ್ಲಿ 130 ಮಂದಿಗೆ ಪಾಸಿಟಿವ್ ಬಂದಿದೆ. ಫ್ಯಾಕ್ಟರಿಯಲ್ಲಿ 3000 ಕ್ಕೂ ಅಧಿಕ ಮಂದಿ ಕೆಲಸಮಾಡುತ್ತಿದ್ದು, ಎಲ್ಲರನ್ನೂ ಪರೀಕ್ಷೆ ಮಾಡಲಾಗುತ್ತಿದ್ದು, ತಾತ್ಕಾಲಿಕವಾಗಿ ಹತ್ತುದಿನ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ ಪಾಸಿಟಿವ್ ಬಂದಿರೋರ ಪರಿಸ್ಥಿತಿ ನಿಜಕ್ಕೂ ಹೇಳತೀರದಾಗಿದೆ. ಸೂಕ್ತ ಚಿಕಿತ್ಸೆಯಿಲ್ಲ, ಬೆಡ್ ವ್ಯವಸ್ಥೆಯಿಲ್ಲದೇ ಸೋಂಕಿತ ಕಾರ್ಮಿಕರು ಕಂಗಾಲಾಗಿದ್ದಾರೆ. ಒಂದು ದೊಡ್ಡ ಹಾಲ್ ನಲ್ಲಿ ದನಗಳಂತೆ ಕೂಡಿ ಹಾಕಿದ್ದಾರೆ. ನಮಗೆ ಚಿಕಿತ್ಸೆ ಕೊಡಿಸಿ ಅಂತಾ ಸೋಸಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ.
ಕಂಪನಿಯ ಆಡಳಿತ ಮಂಡಳಿ ಲಾಕ್ ಡೌನ್ ಮುಗಿದ ಬಳಿಕ ಮುಂಜಾಗ್ರತ ಕ್ರಮ ವಹಿಸುತ್ತೇನೆಂದು ಜಿಲ್ಲಾಡಳಿತಕ್ಕೆ ಭರವಸೆ ನೀಡಿ ಆರಂಭಿಸಿತ್ತು. ಜಿಲ್ಲಾಡಳಿತದ ನಿಯಮವನ್ನೆಲ್ಲಾ ಗಾಳಿಗೆ ತೂರಿ ಕೆಲಸ ಮಾಡಿಸಿದ್ದೇ ಹೆಚ್ಚು ಪಾಸಿಟಿವ್ ಬರೋದಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದೇ ಬಸ್ಸಿನಲ್ಲಿ ನಿಯಮಕ್ಕಿಂತ ಹೆಚ್ಚು ಮಂದಿ ಸಾಗಾಟ ಮಾಡುತ್ತಿದ್ದರಲ್ಲದೇ, ಕೆಲಸ ಮಾಡುವ ವೇಳೆ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಹಲವು ಭಾರಿ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಸಂಘಟನೆಗಳು ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೋವಿಡ್ ಕೇರ್ ಸೆಂಟರ್ ತೆರೆಯಬೇಕೆಂದು ಜಿಲ್ಲಾಡಳಿತ ಸೂಚಿಸಿದ್ದರೂ, ಆಡಳಿತ ಮಂಡಳಿ ತೆರೆಯದೇ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಂಡಿದೆ ಎನ್ನಲಾಗಿದೆ. ಇತ್ತ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇಂದು 131 ಹೊಸ ಕೇಸ್ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2548 ಕ್ಕೆ ಏರಿಕೆಯಾಗಿದ್ದು, ಒಂದೇ ದಿನ ಡೆಡ್ಲಿ ವೈರಸ್ ಐವರನ್ನು ಬಲಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 70 ಕ್ಕೆ ಏರಿಕೆಯಾಗಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.
ಒಟ್ಟಿನಲ್ಲಿ, ಖಾಸಗೀ ಕಂಪನಿ ಹಾಗೂ ಜಿಲ್ಲಾಡಳಿತದ ಯಡವಟ್ಟುಗಳಿಂದ ಇಂದು ಕಾರ್ಮಿಕರು ಸೂಕ್ತ ಚಿಕಿತ್ಸೆ ಹಾಗೂ ಕನಿಷ್ಟ ಮೂಲಸೌಲಭ್ಯ ಸಿಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇತ್ತ ಗಮನಹರಿಸಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಿ, ಫ್ಯಾಕ್ಟರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ಪ್ರತಾಪ್ ಹಿರೀಸಾವೆ ಪವರ್ ಟಿವಿ ಹಾಸನ