ಹಾಸನ : ಕೊರೊನಾ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಈ ಸರ್ಕಾರ ಕೊರೊನಾದಿಂದ ಸತ್ತವರ ಹೆಣದ ಮೇಲೆ ಹಣಮಾಡುವ ದಂಧೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು. ಹಾಸನದಲ್ಲಿ ಲೆಕ್ಕಕೊಡಿ ಅಭಿಯಾನದಡಿ ಸುದ್ದಿಗೋಷ್ಟಿ ನಡೆಸಿದ ಸುರೇಶ್, ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡಲು ಉಭಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು. ಆರಂಭದಿಂದ ಮಹಾಮಾರಿ ವಿರುದ್ಧ ಹೋರಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸಂಪೂರ್ಣ ಎಡವಿದ ಸರ್ಕಾರ, 90 ದಿನಗಳಿಂದ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಅವರು, ಇಷ್ಟೂ ದಿನಗಳು ಮಲಗಿದ್ದವರು ಈಗ ಸತ್ತ ಹೆಣಗಳ ಮೇಲೆ ಹಣ ಮಾಡುವ ನೀಚ ಕೆಲಸದಲ್ಲಿ ಮಂತ್ರಿಗಳು ತೊಡಗಿದ್ದಾರೆ ಎಂದು ಕಿಡಿ ಕಾರಿದರು. ಕೋವಿಡ್ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಪುನರುಚ್ಛಾರ ಮಾಡಿದ ಕೈ ಸಂಸದ, ರಾಜ್ಯ, ರಾಷ್ಟ್ರ ದಲ್ಲಿ ಘಟಿಸಿರುವ ಕೊರೊನಾ ಸಾವಿಗೆ ಆಳುವವರೇ ಕಾರಣ ಎಂದು ನೇರ ಆರೋಪಿಸಿದರು. ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ. ಭ್ರಷ್ಟಾಚಾರದ ಮೂಲ ಎಲ್ಲಿದೆ, ಹಣ ಎಲ್ಲಿ ಹೋಯ್ತು, ವೆಂಟಿಲೇಟರ್ ಖರೀದಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಪಾರ ಮಾಡುತ್ತಿದ್ದಾರೆ. ನಮಗೆ ಬೇಡ, ರಾಜ್ಯದ ಸಮಸ್ತ ಜನರಿಗೆ ಲೆಕ್ಕ ಕೊಡುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ, ಮಂತ್ರಿಗಳಲ್ಲಿ ಹೊಂದಾಣಿಕೆ ಇಲ್ಲ. ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು. ಬಿಜೆಪಿ ಸರ್ಕಾರ ಮಾಡಿರುವ ಹಗರಣದ ಬಗ್ಗೆ ಆರ್ ಎಸ್ ಎಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದ ಅವರು, ಈ ಜಾಣ ಮೌನ ನೋಡಿದ್ರೆ ಅವರೂ ಪಾಲುದಾರರಿದ್ದಾರೆ ಎಂದು ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದರು. ನಾವು ಏನೇ ಮಾತನಾಡಿದ್ರೂ ರಾಜಕೀಯ ಅಂತಾರೆ, ಆದರೆ 30 ಮಂದಿ ಶಾಸಕರನ್ನು ನಿಗಮ ಮಂಡಳಿ ನೇಮಕ ಮಾಡಿರುವುದು ಏನು? ಇದು ರಾಜಕೀಯ ಅಲ್ಲವೇ ಎಂದು ವ್ಯಂಗ್ಯವಾಡಿದರು. ನೋಟಿಸ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಗೊಡ್ಡು ನೋಟಿಸ್ ಬೆದರಿಕೆಗೆ ಕಾಂಗ್ರೆಸ್ ಹೆದರಲ್ಲ. ಹೆದರುವವರು ಈಗಾಗಲೇ ನಿಮ್ಮ ಜೊತೆ ಸೇರಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರ ಬಗ್ಗೆ ಲೇವಡಿ ಮಾಡಿದರು.
ನಾಡಿನ ಜನರ ಹಿತಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ಧ ಎಂದ ಡಿಕೆಎಸ್, ಹಗರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಬೇಕು ಮತ್ತು ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯ ಮಾಡಿದರು. ಕಾಂಗ್ರೆಸ್ ನ 15 ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಉತ್ತರಿಸಿದ ಅವರು, ಆಪರೇಷನ್ ಕಮಲಕ್ಕೆ ಬಿಜೆಪಿಯವರೇ ಫೇಮಸ್. ಸರ್ಕಾರ ಅಲುಗಾಡುವ ಭೀತಿ ಅವರಿಗೆ ಕಾಡುತ್ತಿರಬೇಕು. ಬಿಜೆಪಿ ಸರ್ಕಾರಕ್ಕೆ ಆಂತರೀಕ ಭಯ ಶುರುವಾಗಿರಬೇಕು. ಆ ಕಾರಣಕ್ಕೆ ನಳೀನ್ ಕುಮಾರ್ ಕಟೀಲ್ ಹೀಗೆ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಎಂಎಲ್ಸಿ ಸಿಪಿ ಯೋಗೇಶ್ವರ್ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ ಸುರೇಶ್, ನಂಬಿಕೆ ದ್ರೋಹಿ ಅಂದ್ರೆ ಅವನು ಯೋಗೇಶ್ವರ್. ಅವನು ಬಣ್ಣ ಹಾಕಿ 10 ವರ್ಷವಾಗಿತ್ತು, ಜನರು ಮರೆತಿದ್ದಾರೆ ಎಂದು ನೆನಪಿಸಲು ಎಂಎಲ್ಸಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಯೋಗೇಶ್ವರ್ ಕೆಲ ದಿನಗಳ ಹಿಂದೆ ಯಡಿಯೂರಪ್ಪ ಅವರನ್ನೇ ಮುಗಿಸಲು ಹೋಗಿದ್ದ.
ಈಗ ಅವನನ್ನು ಯಾರು ಎಂಎಲ್ಸಿ ಮಾಡಿದ್ರೋ ಗೊತ್ತಿಲ್ಲ. ಒಳ್ಳೇದಕ್ಕೆ ಕಡ್ಡಿ ಅಲ್ಲಾಡಿಸೋದೇ ಅವನ ಕೆಲಸ, ಅಭಿವೃದ್ಧಿ ದೃಷ್ಟಿಯಿಂದ ನಾನು ಕುಮಾರಸ್ವಾಮಿ, ಡಿಕೆಶಿ, ಅನಿತಾ ಕುಮಾರಸ್ವಾಮಿ ಎಲ್ಲಾ ಚೆನ್ನಾಗಿದ್ದೇವೆ. ವಿಶ್ವಾಸದಿಂದ ಇದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಿಪಿಐ ಗೆ ಟಾಂಗ್ ನೀಡಿದರು.
ಪ್ರತಾಪ್ ಹಿರೀಸಾವೆ ಪವರ್ ಟಿವಿ ಹಾಸನ