ಶಿವಮೊಗ್ಗ : ಬಟ್ಟೆಯನ್ನೇ ಧರಿಸದೇ ವಿವಸ್ತ್ರವಾಗಿ ಓಡಾಡುತ್ತಿದ್ದ ತಮಿಳುನಾಡು ಮೂಲದ ಮಾನಸಿಕ ಅಸ್ವಸ್ಥ ಮಹಿಳೆಗೆ ಪೊಲೀಸರು ಬಟ್ಟೆ ತೊಡಿಸಿ, ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ಪೊಲೀಸರು ಮಾನವೀಯತೆ ಮೆರೆದು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಕ್ರೀದ್ ಹಬ್ಬದ ಪ್ರಯುಕ್ತ ತಾಳಗುಪ್ಪಕ್ಕೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ಸಾಗರ ಗ್ರಾಮಾಂತರ ಠಾಣೆಯ ಎಎಸ್ ಐ ಮೀರಾಬಾಯಿ ಎಂಬುವವರು, ವಿವಸ್ತ್ರದಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಗಮನಿಸಿ, ಕೂಡಲೇ ಇತರೆ ಸಿಬ್ಬಂದಿಗಳ ಸಹಾಯದಿಂದ ವಿವಸ್ತ್ರಳಾದ ಮಹಿಳೆಗೆ ಬಟ್ಟೆ ಧರಿಸಿ, ದೈಹಿಕವಾಗಿ ಹಸಿವಿನಿಂದ ಬಳಲುತ್ತಿದ್ದ ಮಹಿಳೆಗೆ ತಿಂಡಿ, ನೀರು ನೀಡಿ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಂತರ ಮಹಿಳೆಯನ್ನು ಸಾಗರದಿಂದ ಬೆಂಗಳೂರಿಗೆ ಬಸ್ ಹತ್ತಿಸಿ ಆಕೆಯ ಊರಿಗೆ ಕಳುಹಿಸುವ ಪ್ರಯತ್ನ ಸಹ ಮಾಡಿದ್ದು, ಪೊಲೀಸರು ಎಂದರೆ, ಒಂದೇ ಭಾವನೆಯಿಂದ ನೋಡುವವರಿಗೆ, ಇವರು ಅಪ್ಯಾಯಮಾನವಾಗಿದ್ದಾರೆ. ಪೋಲಿಸರಲ್ಲಿಯೂ ಒಳ್ಳೆಯವರು ಇದ್ದಾರೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಈ ಒಂದು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸುತ್ತಿದ್ದಾರೆ.