ಬಳ್ಳಾರಿ : ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದೆ ಜಿಲ್ಲೆಯಲ್ಲಿ ಕೊರೋನಾ ವಾರಿಯರ್ ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಕುರುಗೋಡು ತಾಲೂಕಿನ ಕೋಳೂರು ಆರೋಗ್ಯ ಕೇಂದ್ರದ ಕಿರಿಯ ಸಹಾಯಕ ಮೃತರಾದವರು. ಶುಕ್ರವಾರ ಮನೆಮನೆ ಸರ್ವೇ ಮಾಡುವ ಸಂದರ್ಭ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಜಿಲ್ಲೆಯ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಸರಿಯಾದ ಸಮಯಕ್ಕೆ ಅವರಿಗೆ ವೆಂಟಿಲೇಟರ್ ಲಭ್ಯವಾಗದ ಕಾರಣ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ಧನ್, ವೆಂಟಿಲೇಟರ್ ಲಭ್ಯತೆ ಇರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಸರಿಸುಮಾರು 70ಕ್ಕೂ ಹೆಚ್ಚು ವೆಂಟಿಲೆಟರ್ ಇವೆ ಅಂತ ಈ ಹಿಂದೆ ಜಿಲ್ಲಾಡಳಿತ ಮಾಹಿತಿ ಕೊಟ್ಟಿತ್ತು. ಆದರೀಗ ವೆಂಟಿಲೇಟರ್ ನಾನ್ ಕೊವಿಡ್ ಪೇಷೆಂಟ್ಗಳಿಗೆ ಸಿಗುತ್ತಿಲ್ಲ.
ಮೃತನ ಕೊರೋನಾ ರಾಪಿಡ್ ಟೆಸ್ಟ್ ಮಾಡಲಾಗಿದ್ದು ಅದರಲ್ಲಿ ನೆಗೆಟಿವ್ ಬಂದಿದೆ. ಮತ್ತೊಂದು ಹಂತದಲ್ಲಿ RTPCR ಟೆಸ್ಟ್ ಗೆ ಕಳುಹಿಸಲಾಗಿದೆ.
ಈ ಘಟನೆ ನಾನ್ ಕೊವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
-ಅರುಣ್ ನವಲಿ, ಬಳ್ಳಾರಿ