ಚಿಕ್ಕಮಗಳೂರು : ಮಲೆನಾಡ ಕಾಫಿಯನ್ನ ವಿಶ್ವದಾದ್ಯಂತ ಪಸರಿಸಿದ್ದ ಕಾಫಿಯ ಹರಿಕಾರ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆಯ ಮೊದಲ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪ್ರತಿಮೆಯ ಶಿಲಾನ್ಯಾಸಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಸಮೀಪದ ಭಾರತೀ ಎಸ್ಟೇಟ್‍ನಲ್ಲಿ ಇಂದು ಶಿಲಾನ್ಯಾಸ ಶಂಕುಸ್ಥಾಪನೆ ನೆರವೇರಿದ್ದು, ಇನ್ನ ಎರಡ್ಮೂರು ತಿಂಗಳಲ್ಲಿ ಸಿದ್ಧಾರ್ಥ್ ಅವರ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಸಿದ್ಧಾರ್ಥ್ ಅವರ ಅಭಿಮಾನಿ ಗೃಹ ಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪ ಗೌಡ ಹಾಗೂ ತೀರ್ಥಹಳ್ಳಿ ರತ್ನಾಕರ್ ಮುಂದಾಳತ್ವದಲ್ಲಿ ನಿರ್ಮಾಣಗೊಳ್ತಿರೋ ಪ್ರತಿಮೆಗೆ ಕಾಫಿ ಬೆಳೆಗಾರರು, ಒಕ್ಕಲಿಗರ ಸಂಘ, ಹಾಗೂ ಕಾಫಿ ಬೆಳೆಗಾರರ ಸಂಘದ ಸದಸ್ಯರು ಮುಂದಾಗಿದ್ದಾರೆ. ಇಂದು ನೆರವೇರಿದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅವರ ಕುಟುಂಬಸ್ಥರನ್ನ ಆಹ್ವಾನಿಸಿರಲಿಲ್ಲ. ಇನ್ನು ಎರಡ್ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣಗೊಂಡ ಬಳಿಕ ಅವರನ್ನ ಆಹ್ವಾನಿಸಲು ಸಿದ್ಧಾರ್ಥ್ ಅವರ ಅಭಿಮಾನಿಗಳು ಮುಂದಾಗಿದ್ದಾರೆ. ಕಾಫಿ ಬೋರ್ಡ್‍ನ್ನ ತೆಗೆದು ಹಾಕಿ ಬೆಳೆಗಾರರಿಗೆ ಸ್ವತಂತ್ರವಾಗಿ ವ್ಯಾಪಾರ ಮಾಡುವ ಅವಕಾಶ ಕಲ್ಪಸಿದ್ದ ಸಿದ್ಧಾರ್ಥ್ ಹೆಗ್ಡೆಯವರನ್ನ ಇಂದು ಬೆಳೆಗಾರರು ನೆನೆದು ಮತ್ತೆ ಹುಟ್ಟಿ ಬನ್ನಿ ಎಂದು ಪ್ರಾರ್ಥಿಸಿದ್ದಾರೆ.
ಸಚಿನ್ ಶೆಟ್ಟಿ ಚಿಕ್ಕಮಗಳೂರು….