Sunday, January 19, 2025

ಒಂದು ವರ್ಷ ಕಳೆದರೂ ಪ್ರವಾಹ ಸಂತ್ರಸ್ಥರಿಗೆ ಬಂದಿಲ್ಲ ಪರಿಹಾರ.. ಅಧಿಕಾರಿಗಳೇ ಇತ್ತ ಗಮನ ಹರಿಸ್ತೀರಾ…?

ಮೈಸೂರು : ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಇನ್ನೂ ಪರಿಹಾರ ಬಂದಿಲ್ಲ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಂತ್ರಸ್ಥರಾದ ಕುಟುಂಬಗಳು ಇನ್ನೂ ಸಂಕಷ್ಟದಿಂದ ಹೊರಬಂದಿಲ್ಲ. ಮುರುಕು ಮನೆಯಲ್ಲೇ ವಾಸಿಸುತ್ತಿರುವ ಕುಟುಂಬಗಳಿಗೆ ಈ ವರಮಹಾಲಕ್ಷ್ಮಿ ಹಬ್ಬಕ್ಕೂ ವರ ಸಿಗಲಿಲ್ಲ. ಸರ್ಕಾರ ಘೋಷಿಸಿದ ಪರಿಹಾರಕ್ಕಾಗಿ ಕಾದಿರುವ ಕುಟುಂಬವೀಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ಮುರಿದು ಬಿದ್ದಿರುವ ತಾರಸಿ, ಕುಸಿದು ಬಿದ್ದ ಗೋಡೆಗಳು, ಟಾರ್ಪಾಲೇ ಬಾಗಿಲು, ಆಕಾಶವೇ ಸೂರು, ಬಿರುಕು ಬಿಟ್ಟು ಈಗ್ಲೋ ಆಗ್ಲೋ ಕುಸಿದು ಬೀಳುವಂತಿರುವ ಕಟ್ಟಡ.. ಇವೆಲ್ಲಾ ಇರೋದು ನಂಜನಗೂಡಿನ ದೇವಾಲಯದ ಬಳಿ ಇರುವ ಒಕ್ಕಲಗೇರಿ, ಕುರುಬಗೇರಿ, ಮೇದರಗೇರಿ ಬಡಾವಣೆಯಲ್ಲಿರುವ ಕೆಲವು ಮನೆಗಳ ಶೋಚನೀಯ ಸ್ಥಿತಿ. ಕಳೆದ ವರ್ಷ ಬಿದ್ದ ಭಾರಿ ಮಳೆಗೆ ಉಂಟಾದ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಮನೆಗಳು. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ವೇಳೆ ಪ್ರವಾಹದಲ್ಲಿ ಕುಸಿದುಬಿದ್ದ ಮನೆಗಳು. ಪ್ರವಾಹಕ್ಕೆ ಸಿಲುಕಿದ ನೂರಾರು ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಿ ಪರಿಹಾರ ಘೋಷಣೆ ಮಾಡಿತ್ತು. ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಬಾಡಿಗೆ ಮನೆಯಲ್ಲಿ ಉಳಿದುಕೊಂಡವರಿಗೆ ತಿಂಗಳಿಗೆ 5 ಸಾವಿರ ಬಾಡಿಗೆ ಭರಿಸುವ ಭರವಸೆ ನೀಡಿತ್ತು. ಕೆಲವು ಕುಟುಂಬಗಳಿಗೆ ಪರಿಹಾರ ಕೊಟ್ಟ ಸರ್ಕಾರ ಕೆಲವು ಕುಟುಂಬಗಳಿಗೆ ಕೊಡಲೇ ಇಲ್ಲ. ಸರ್ಕಾರ ಘೋಷಿಸಿದ ಪರಿಹಾರಕ್ಕಾಗಿ ಅಲೆದ ಕುಟುಂಬಗಳು ಹೈರಾಣರಾಗಿದ್ದಾರೆ. ಒಂದು ವರ್ಷ ಕಳೆದ್ರೂ ಪರಿಹಾರ ಕೈ ಸೇರಿಲ್ಲ. ಮುರಿದ ಬಿದ್ದ ಮನೆಗಳಲ್ಲೇ ಜೀವ ಕೈಲಿ ಹಿಡಿದು ವಾಸ ಮಾಡುತ್ತಿದ್ದಾರೆ. ಕಳೆದ ವರ್ಷದ ಪ್ರವಾಹದಲ್ಲಿ ಹಾನಿಯಾಗದ ಮನೆಗಳಿಗೆ ಪರಿಹಾರ ಈಗಾಗಲೇ ತಲುಪಿದೆ. ಆದರೆ ಸಂಪೂರ್ಣ ಹಾನಿಯಾದ ಮನೆಗಳಿಗೆ ಮಾತ್ರ ಇನ್ನೂ ತಲುಪಿಲ್ಲ. ಬೇರೆ ದಾರಿ ಕಾಣದ ಕುಟುಂಬ ಶಿಥಿಲವಾದ ಮನೆಗಳನ್ನೇ ಆಶ್ರಯ ಪಡೆದಿದೆ. ಯಾವುದೇ ಕ್ಷಣದಲ್ಲಾದ್ರೂ ಮನೆ ಕುಸಿಯುವ ಸಂಭವವಿದೆ. ತಾಲೂಕು ಕಚೇರಿಗೆ ಅಲೆದಾಡಿರುವ ಕುಟುಂಬ ಕಣ್ಣೀರು ಹಾಕುತ್ತಿದೆ. ಮನೆ ಇಲ್ಲದ ಮೇಲೆ ಬದುಕು ಬೇಡವೆಂಬ ನಿರ್ಧಾರಕ್ಕೆ ಬಂದಿದೆ.
ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲೂ ತಾರತಮ್ಯ ಆರೋಪಗಳು ಕೇಳಿ ಬರುತ್ತಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣೆಗೆ ಬೆಣ್ಣೆ ಹಚ್ಚುವ ಅಧಿಕಾರಿ ವರ್ಗದ ಧೋರಣೆಗೆ ಏನೆಂದು ಕರೆಯಬೇಕೋ ಗೊತ್ತಿಲ್ಲ. ಸಂತ್ರಸ್ಥರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿರುವ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ..

RELATED ARTICLES

Related Articles

TRENDING ARTICLES