ಶಿವಮೊಗ್ಗ : ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥ್ ಗೌಡ ಪುನಃ ಮುಂದುವರೆದಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆಯಬೇಕಿದ್ದ ಚುನಾವಣೆಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ, ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದ ಮಂಜುನಾಥ್ ಗೌಡರು, ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಮುಂದಿನ ಆದೇಶದವರೆಗೂ ತಡೆಯಾಜ್ಞೆ ಇದ್ದು, ಇದರಿಂದಾಗಿ, ಇವರ ವಿರೋಧಿಗಳಿಗೆ ತೀವ್ರ ಮುಖಭಂಗವಾದಂತಾಗಿದೆ.
ಅಂದಹಾಗೆ, ಆರ್.ಎಂ. ಮಂಜುನಾಥಗೌಡ ಅವರನ್ನು ಸಹಕಾರಿ ಸಂಘದ ಪ್ರಾಥಮಿಕ ಸದಸ್ಯತ್ವದಿಂದ ಜಂಟಿ ನಿರ್ದೇಶಕರು ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಂಜುನಾಥಗೌಡರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇವರ ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಾಲಯ ಗೌಡರ ಸದಸ್ಯತ್ವ ರದ್ದತಿ ಬಗ್ಗೆಯೇ ತಡೆಯಾಜ್ಞೆ ನೀಡಿದ್ದು, ಇದರಿಂದ ಇಂದು ನಡೆಯಬೇಕಾಗಿದ್ದ ಬ್ಯಾಂಕ್ ಅಧ್ಯಕ್ಷ ಚುನಾವಣೆ ಸದ್ಯಕ್ಕೆ ನಿಂತಿದ್ದು, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರ್.ಎಂ. ಮಂಜುನಾಥ ಗೌಡರೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇಂದು ಹೈಕೋರ್ಟ್ ಆದೇಶ ನೀಡುತ್ತಿದ್ದಂತೆ, ಬ್ಯಾಂಕ್ ಗೆ ಆಗಮಿಸಿದ ಆರ್.ಎಂ. ಮಂಜುನಾಥ್ ಗೌಡರು ತಮ್ಮ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ರು. ಇದರಿಂದ ಡಿಸಿಸಿ ಬ್ಯಾಂಕ್ ಮೇಲೆ ಇಟ್ಟಿದ್ದ ಬಿಜೆಪಿ ಕಣ್ಣು ದುರ್ಬಲವಾಗಿದ್ದು, ಒಂದು ರೀತಿಯಲ್ಲಿ ಬಿಜೆಪಿಗೆ ಹಿನ್ನಡೆ ಎಂದೇ ಹೇಳಬಹುದಾಗಿದೆ. ಇಂದು ಬೆಳಿಗ್ಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಎಲ್ಲ ಸಿದ್ದತೆಗಳು ನಡೆದಿತ್ತು. ಪ್ರಭಾರ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರೇ ಅಧ್ಯಕ್ಷರಾಗುವ ಸೂಚನೆಗಳು ಇದ್ದವು. ಆದರೆ ಕೋರ್ಟ್ ಆದೇಶದಿಂದ ಈ ಎಲ್ಲಾ ಪ್ರಕ್ರಿಯೆಗಳು ಮುಂದಕ್ಕೆ ಹೋಗಿದ್ದು, ನೋವಿನ ನಡುವೆಯೇ, ಅಧ್ಯಕ್ಷ ಗಾದಿಯನ್ನು ಮಂಜುನಾಥ್ ಗೌಡರು ಅಲಂಕರಿಸಿದ್ದಾರೆ.
ಅಷ್ಟಕ್ಕೂ ಇಂದು ಅಧ್ಯಕ್ಷ ಗಾದಿಯ ಚುನಾವಣಾ ಪ್ರಕ್ರಿಯೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಎಲ್ಲಾ ನಿರ್ದೇಶಕರುಗಳಿಗೆ ವೇಳಾಪಟ್ಟಿಯನ್ನ ಕಳಿಸಿಕೊಡಲಾಗಿತ್ತು. ಆದರೆ, ಹೈಕೋರ್ಟ್ ಮಧ್ಯಂತರ ತೀರ್ಪನ್ನು ಸರ್ಕಾರಿ ವಕೀಲರು ಚುನಾವಣಾಧಿಕಾರಿಗಳಿಗೆ ನೀಡಿದ್ದರಿಂದ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಜಂಟಿ ನಿರ್ದೇಶಕರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಎಂ. ಮಂಜುನಾಥ ಗೌಡರು, ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಚುನಾವಣೆಯನ್ನು ಮತ್ತು ಅವರ ರದ್ದು ಮಾಡಿದ್ದ ಆಧ್ಯಕ್ಷರ ಹುದ್ದೆಗೆ ತಡೆಯಾಜ್ಞೆ ನೀಡಿದೆ. ಇದರ ಜೊತೆಗೆ ತೆರವಾಗಿದ್ದ ಎಂ.ಡಿ. ಸ್ಥಾನವನ್ನು ಕೂಡ ಈ ಹಿಂದಿನಂತೆಯೇ ಮುಂದುವರೆದಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಚುನಾವಣೆಗೆ ತಡೆಯಾಗಿರುವುದು, ಗೌಡರ ಪಾಳಯದಲ್ಲಿ ಸಂತಸ ಮೂಡಿಸಿದೆ.
ಒಟ್ಟಾರೆ, ಮಂಜುನಾಥ್ ಗೌಡರಿಗೆ ಎಲ್ಲಾ ಪಕ್ಷದಲ್ಲಿಯೂ ಆತ್ಮೀಯರಿದ್ದರೂ ಕೂಡ, ಈ ಬೆಳವಣಿಗೆ, ಬಿಜೆಪಿಯ ಕೆಲವರಿಗೆ ಇರಿಸುಮುರುಸಾಗಿರುವುದಂತೂ ಸತ್ಯ.