ವಿಜಯಪುರ : ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪೊಮ್ಮಲ ಸುನೀಲ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು. ಈ ಮೊದಲಿದ್ದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಇವರನ್ನು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಪೊಮ್ಮಲ ಸುನೀಲ್ ಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಮಾ ಪುಷ್ಪಗುಚ್ಚ ನೀಡಿ ಜಿಲ್ಲಾಧಿಕಾರಿಗಳಿಗೆ ಸ್ವಾಗತಿಸಿದರು. ಪೊಮ್ಮಲ ಸುನೀಲ್ ಕುಮಾರ್ ಅವರು 2011ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಅವರು ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ತಮಿಳುನಾಡಿನ ಚೆನ್ನೈ ಮತ್ತು ಅಮೆರಿಕಾದ ನ್ಯೂಜೆರ್ಸಿಯಲ್ಲಿ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ವಿವಿಧ ಕಂಪನಿಗಳಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಯಾದಗಿರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 7 ತಿಂಗಳು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಸುಮಾರು 2 ವರ್ಷ, ಬೆಂಗಳೂರಿನಲ್ಲಿ ವಸತಿ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ರೆಗ್ಯುಲಾರಿಟಿ ಅಥಾರಿಟಿಯಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಇದೀಗ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.