ಚಿತ್ರದುರ್ಗ : ಐತಿಹಾಸಿಕ ನಗರದ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಬೃಹತ್ ಕೆರೆ ಮಲ್ಲಾಪುರ ಕೆರೆ. ಇದು ಒಂದು ಕಾಲದಲ್ಲಿ ನಗರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನರ ಜೀವನಾಡಿಯಾಗಿತ್ತು. ಇದೀಗ ಅದುವೇ ಅಲ್ಲಿನ ಜನರಿಗೆ ಕಂಟಕವಾಗಿದೆ .
ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗೆ ನುಗ್ಗಿದ ಮಲ್ಲಾಪುರ ಕೆರೆ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ ಇಲ್ಲಿನ ನಿವಾಸಿಗಳು.
ಚಿತ್ರದುರ್ಗ ನಗರ ಬೆಳೆಯುತ್ತಿದ್ದಂತೆ ನಗರದ ಒಳಚರಂಡಿಯ ತ್ಯಾಜ್ಯ ಸೇರಿ ಕೆರೆ ಮಲಿನಗೊಂಡಿದೆ. ಅಷ್ಟು ಮಾತ್ರವಲ್ಲದೆ ಆಸ್ಪತ್ರೆಗಳ ತ್ಯಾಜ್ಯವೂ ಕೂಡ ಸೇರಿ ಕೆರೆ ಸಂಪೂರ್ಣ ಕೊಳಚೆಯಾಗಿದೆ. ಈ ಹಿಂದೆ ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದಾಗ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಯಿತ್ತು. ಆದ್ರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗ್ತಿರೋದ್ತಿಂದ ಕೋಡಿಬಿದ್ದ ನೀರು ಹರಿದು ಹೋಗುವ ಮಾರ್ಗ ಮುಚ್ಚಿಹೋಗಿದೆ . ಹೀಗಾಗಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೆರೆ ಭರ್ತಿಯಾಗಿ ಕೋಡಿ ಒಡೆದು ಪ್ರವಾಹದಂತೆ ಹರಿಯುತ್ತಿದ್ದು, ಕೆರೆಯಿಂದ ಹರಿದುಬಂದ ನೀರು ಮಲ್ಲಾಪುರದ ಮನೆಗಳಿಗೆ ನುಗ್ಗಿ ಇಡೀ ರಾತ್ರಿ ಜನರ ನಿದ್ದೆಗೆಡಿಸಿದೆ. ಅಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ತಂದೊಡ್ಡಿದೆ.