ಹಾಸನ : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಒಂದು ವರ್ಷವಾಯಿತು, ಸಿಎಂ ದ್ವೇಷ ರಾಜಕಾರಣ ಮಾಡಲ್ಲ ಎಂದು ಪದೇ ಪದೇ ಹೇಳುತ್ತಾರೆ, ಆದರೆ ಹಾಗೆ ಮಾಡುವುದನ್ನು ಬಿಟ್ಟಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ಹಾಸನ, ಬೇಲೂರು, ಚಿಕ್ಕಮಗಳೂರು ರೈಲು ಮಾರ್ಗ ಕ್ಕೆ 462 ಮಂಜುರಾತಿ ಆಗಿದೆ ಕೇಂದ್ರ-ರಾಜ್ಯ ಸರ್ಕಾರ ಶೇ.50 ರಷ್ಟು ಸಹಭಾಗಿತ್ವದಲ್ಲಿ 3 ವರ್ಷದಲ್ಲಿ ಮುಗಿಸಲು ಒಪ್ಪಂದ ಆಗಿತ್ತು, ಹಾಸನದಲ್ಲಿ ತೋಟಗಾರಿಕೆ ವಿವಿ ಮಾಡಲು ಹಿಂದೆ ತೀರ್ಮಾನ ಕೂಡಾ ಆಗಿತ್ತು, ಈಗ ಅವೆಲ್ಲವನ್ನೂ ವಜಾ ಮಾಡಿದ್ದಾರೆ.
250 ಕೋಟಿ ವೆಚ್ಚದ ಹೊಸ ಜೈಲು ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ, ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದುರುದ್ದೇಶದಿಂದಲೇ ಹೀಗೆ ಮಾಡಲಾಗುತ್ತಿದೆ ಎಂದು ದೂರಿದ ಅವರು, ಕೊರೊನಾ ಸಂಕಷ್ಟಕ್ಕೆಂದು ನೀಡಿರುವ ಪರಿಹಾರ ಹಣ ಅನೇಕರಿಗೆ ತಲುಪಿಲ್ಲ, ಇಂಥಹ ಭ್ರಷ್ಟ ಸರ್ಕಾರ ನನ್ನ ಜೀವನದಲ್ಲಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇವಣ್ಣ ಭ್ರಷ್ಟ ಎಂಬ ಸಚಿವ ಕೆ.ಎಸ್. ಈಶ್ವರಪ್ಪಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ರೇವಣ್ಣ, ಈಶ್ವರಪ್ಪ ಹಿರಿಯರು ಇಂತಹ ಲುಚ್ಚಾ ಹೇಳಿಕೆಯನ್ನು ನಿಲ್ಲಿಸಬೇಕು. ನಾನು ಮಂತ್ರಿಯಾಗಿದ್ದಾಗ ಅವರು ಹೇಳಿದ ಅನೇಕ ಅಧಿಕಾರಿಗಳನ್ನು ವರ್ಗ ಮಾಡಿದ್ದೇನೆ. ಆಗ ಅವರು ಎಷ್ಟು ಹಣ ಕೊಟ್ಟಿದ್ದರು ಬಹಿರಂಗ ಪಡಿಸಲಿ ಎಂದು ಸವಾಲ್ ಹಾಕಿದರು. ಅವರು ವರ್ಗ ಮಾಡಿಸಿಕೊಂಡಿರುವವರ ಲಿಸ್ಟ್ ಇದೆ ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುತ್ತೇನೆ. ವಿಧಾನಸಭೆ ಅಧಿವೇಶನ ಕರೆಯಲಿ ಎಲ್ಲವನ್ನೂ ಬಿಚ್ಚಿಡುವೆ, ಯಡಿಯೂರಪ್ಪ ಸಮ್ಮುಖದಲ್ಲೇ ದಾಖಲೆ ಇಡುವೆ ಎಂದು ತಿರುಗೇಟು ನೀಡಿದರು.
ನಾನು ವರ್ಗಾವಣೆಗೆ ಲಂಚ ಪಡೆದಿದ್ದರೆ ಇಂದೇ ರಾಜಕೀಯ ಬಿಟ್ಟು ಹೋಗುವೆ ಎಂದು ಈಶ್ವರಪ್ಪಗೆ ಬಹಿರಂಗ ಚಾಲೆಂಜ್ ಹಾಕಿದರು. ಅವರು ಮಾಡಿರುವ ಹಲ್ಕಾ ಕೆಲಸಕ್ಕೆ ನನ್ನನ್ನು ದೂರಬೇಡಿ, ಒಂದು ವರ್ಷದಿಂದ ಆಡಳಿತ ನಡೆಸಿರುವುದು ಯಡಿಯೂರಪ್ಪ ಅಲ್ಲ, ಯಾರು ಎಂಬುದು ಈಡೀ ರಾಜ್ಯದ ಜನರಿಗೆ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಎಳೆ ಎಳೆಯಾಗಿ ಹೇಳುವೆ. ಗ್ರಾಪಂ ಚುನಾವಣೆ ಮೀಸಲು ನಿಗದಿಯಲ್ಲಿಯೂ ಕೀಳುಮಟ್ಟದ ರಾಜಕೀಯ ಮಾಡಲಾಗಿದೆ. ಚುನಾವಣಾ ಆಯೋಗ ಸರ್ಕಾರದ ಮುಲಾಜಿನಲ್ಲಿದೆ. ಹಾಸನದಲ್ಲಿ ನಗರಸಭೆ, ಪುರಸಭೆ ಚುನಾವಣೆ ನಡೆದು 2 ವರ್ಷವಾದ್ರೂ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಆಗಿಲ್ಲ. ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ರೇವಣ್ಣ ಕಳೆದ 12 ತಿಂಗಳಿಂದ ಇಂಥ ಲೂಟಿ ಸರ್ಕಾರಗಳನ್ನು ನಾವು ನೋಡಿಲ್ಲ ಎಂದರು.