ರಾಮನಗರ : ಚನ್ನಪಟ್ಟಣದಲ್ಲಿ ಈಗ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಭಾರಿ ವಾಕ್ಸಮರ ನಡೆಯುತ್ತಿದೆ. ಬಿಜೆಪಿ MLC ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿ ಹೆಚ್ಡಿಕೆ – ಡಿಕೆಶಿ ಇಬ್ಬರು ರಿಟೈರ್ಡ್ ಕುದುರೆ ಎಂದ ವಿಚಾರದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ – ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಟಿ ನಡೆಸಿ ಯೋಗೇಶ್ವರ್ ಸತ್ತ ಕುದುರೆ, ಕುಂಟು ಕುದುರೆ ಎಂದು ಲೇವಡಿ ಮಾಡಿದ್ದರು. ಇದಕ್ಕೆ ವಿರುದ್ಧ ಇಂದು ಬಿಜೆಪಿ ಕಾರ್ಯಕರ್ತರು ಚನ್ನಪಟ್ಟಣದ ಯೋಗೇಶ್ವರ್ ನಿವಾಸದಲ್ಲಿ ಪ್ರೆಸ್ಮೀಟ್ ನಡೆಸಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕುದುರೆಯೇ ಇಲ್ಲ, ಪ್ರತಿ ಬಾರಿಯ ಚುನಾವಣೆಯಲ್ಲಿ ಬೇರೆ ಊರಿನ ಕುದುರೆಗಳನ್ನ ಕರೆದುಕೊಂಡು ಬರ್ತಾರೆ. ಈ ಕ್ಷೇತ್ರದ ಸ್ವಂತ ಕುದುರೆ ಎಲ್ಲಿದೆ ಎಂದು ಕಿಚಾಯಿಸಿದರು.
ಇನ್ನು ಜೆಡಿಎಸ್ ಕುದುರೆಯಂತು ಸದ್ಯಕ್ಕೆ ಕ್ಷೇತ್ರದ ಕಡೆಗೆ ಬರುತ್ತಿಲ್ಲ ಎಂದು ಡಿಕೆಶಿ – ಹೆಚ್ಡಿಕೆ ಗೆ ಟಾಂಗ್ ಕೊಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಚನ್ನಪಟ್ಟಣ ಬಿಜೆಪಿ ಕುದುರೆ ಯೋಗೇಶ್ವರ್ ಯಾಕೆ ಕಾಣಲಿಲ್ಲ? ಅಧಿಕಾರ ಬಂದ ತಕ್ಷಣ ಪ್ರತ್ಯೇಕವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಪಿವೈ ಬೆಂಬಲಿಗರು. ಇಷ್ಟು ದಿನಗಳ ಕಾಲ ನಮ್ಮ ಕುದುರೆಗೆ ಅಧಿಕಾರ ಇರಲಿಲ್ಲ, ಹಾಗಾಗಿ ಜನರೆದುರು ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ನೀವೆ ನೋಡಿ ನಮ್ಮ ಕುದುರೆಯ ಸವಾರಿಯನ್ನ ಎನ್ನುವ ಮೂಲಕ ಯೋಗೇಶ್ವರ್ ಇನ್ನು ಮುಂದೆ ಫುಲ್ ಆಕ್ಟೀವ್ ಆಗ್ತಾರೆಂದು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಕುದುರೆಗಳು ಭವಿಷ್ಯದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಡೆಗೆ ಹೇಗೆ ಸವಾರಿ ಮಾಡಲಿವೆ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.