ಕೋಲಾರ : ದೇಶದ ಹಲವು ಉದ್ಯಮಗಳ ಮೇಲೆ ಕೋವಿಡ್ನ ಕರಿನೆರಳು ಬಿದ್ದಿದೆ. ಈ ಪೈಕಿ ಹೈನೋದ್ಯಮವೂ ಒಂದಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳು ಇದೀಗ ಬಂದ್ ಆಗಿರೋದ್ರಿಂದ ಅಲ್ಲಿಗೆ ಪೂರೈಕೆಯಾಗ್ತಿದ್ದ ಹಾಲು ಸ್ಥಗಿತವಾಗಿದೆ. ಇದ್ರಿಂದಾಗಿ ಹಾಲು ಒಕ್ಕೂಟಗಳ ಕೋಟ್ಯಾಂತರ ರುಪಾಯಿ ವಹಿವಾಟಿಗೆ ಬರೆ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಮನೆಗೆ ಹಾಲು ಪುಡಿಯನ್ನು ಪೂರೈಸುವ ಪ್ರಸ್ತಾಪ ಮುಂಚೂಣಿಗೆ ಬಂದಿದೆ.
ರಾಜ್ಯದಲ್ಲಿ ಹದಿಮೂರು ಹಾಲು ಒಕ್ಕೂಟಗಳಿವೆ. ಈ ಎಲ್ಲ ಒಕ್ಕೂಟಗಳಲ್ಲಿ ಸುಮಾರು ಎಪ್ಪತ್ತೈದು ಲಕ್ಷ ಲೀಟರ್ ಹಾಲು ನಿತ್ಯವೂ ಸಂಗ್ರಹವಾಗ್ತಿದೆ. ನಮ್ಮ ರಾಜ್ಯ ಮಾತ್ರವಲ್ಲ, ನೆರೆ ರಾಜ್ಯ, ನೆರೆಯ ದೇಶಗಳಿಗೆ ಹಾಲು ಪೂರೈಸುವ ಆರ್ಥಿಕವಾಗಿ ಬಲಿಷ್ಟವಾಗಿದ್ದ ಹಾಲು ಒಕ್ಕೂಟಗಳು ಕೋವಿಡ್ ಕಾರಣಕ್ಕಾಗಿ ನಾಲ್ಕು ತಿಂಗಳಿನಿಂದೀಚೆಗೆ ಸೊರಗಿವೆ. ಎಲ್ಲ ಸಭೆ-ಸಮಾರಂಭಗಳು ರದ್ದಾಗಿರೋದ್ರಿಂದ ಹಾಲಿಗೆ ಮಾರುಕಟ್ಟೆಯಿಲ್ಲದೆ ಒಕ್ಕೂಟಗಳು ನಷ್ಟದಲ್ಲಿವೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಶಕಗಳಿಂದಲೂ ಬಿಸಿಯೂಟ ಕಾರ್ಯಕ್ರಮವು ಯಶಸ್ವಿಯಾಗಿ ನಡೆದುಕೊಂಡು ಬರ್ತಿದೆ. ಪ್ರಸ್ತುತ ಕೋವಿಡ್ ಕಾರಣಕ್ಕಾಗಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಆದ್ರೆ, ಬಿಸಿಯೂಟದ ದಿನಸಿ ಪದಾರ್ಥವು ಕಿಟ್ ಮೂಲಕ ವಿದ್ಯಾರ್ಥಿಗಳ ಮನೆ ಸೇರುತ್ತಿದೆ. ಅದೇ ಮಾದರಿಯಲ್ಲಿ ಹಾಲು ಪುಡಿಯನ್ನೂ ವಿದ್ಯಾರ್ಥಿಗಳ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ರೆ ಒಕ್ಕೂಟಗಳಿಗೆ ಆಗ್ತಿರೋ ನಷ್ಟವನ್ನು ಕಡಿಮೆ ಮಾಡಲು ಸಾಧ್ಯ ಅನ್ನೋ ಸಲಹೆ ಕೇಳಿ ಬಂದಿದೆ.
ಕೋವಿಡ್ ರೋಗದ ವಿರುದ್ದ ಶಕ್ತಿವರ್ಧಕವಾಗಿ ಹಾಲು ಪ್ರಯೋಜನಕಾರಿಯಾಗಿದೆ. ಶಾಲೆಗಳು ಬಂದ್ ಆಗಿರುವ ಈ ಸಂಕಷ್ಟದ ವೇಳೆಯಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳ ಮನೆಗೇ ಹಾಲು ಪುಡಿ ತಲುಪಿಸುವುದು ಸೂಕ್ತ ಅಂತಾರೆ ಪೋಷಕರು.
ಒಟ್ನಲ್ಲಿ, ಒಕ್ಕೂಟಗಳ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಕೊರೋನಾ ರೋಗದ ವಿರುದ್ದ ಹೋರಾಡಲು ಸೂಕ್ತವೆನಿಸುವ ಹಾಲನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮನೆಗೆ ಪೂರೈಸುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.
ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮನೆಗೆ ಹಾಲು ಪುಡಿ ಪೂರೈಸುವ ಹೊಸ ಚಿಂತನೆ
TRENDING ARTICLES