ಕೋಲಾರ : ಜಿಲ್ಲೆಯಲ್ಲಿ ಈ ಸಲ ಶ್ರಾವಣ ಮಾಸದ ಸಂಭ್ರಮವಿಲ್ಲ. ಜಿಲ್ಲೆಯ ಎರಡು ಪ್ರಮುಖ ದೇವಾಲಯಗಳಲ್ಲಿ ಶ್ರಾವಣದ ಸಂಭ್ರಮಕ್ಕೆ ಜಿಲ್ಲಾಡಳಿತವು ಬ್ರೇಕ್ ಹಾಕಿದೆ. ಬಂಗಾರು ತಿರುಪತಿ ಮತ್ತು ಚಿಕ್ಕ ತಿರುಪತಿಯ ದೇಗುಲಗಳನ್ನು ಬಂದ್ ಮಾಡಲಾಗಿದೆ. ಸ್ವಾಮಿ ಶ್ರೀನಿವಾಸನ ಭಕ್ತರಲ್ಲಿ ಇದು ನಿರಾಸೆಯನ್ನು ಮೂಡಿಸಿದೆ. ಇದು ಕೊರೋನಾ ವೈರಸ್ ಎಫೆಕ್ಟ್.
ಕೋಲಾರ ಜಿಲ್ಲೆಯು ಆಂದ್ರಪ್ರದೇಶದ ಗಡಿ ಭಾಗದಲ್ಲಿದೆ. ನೆರೆಯ ತಿರುಪತಿಯ ಶ್ರೀನಿವಾಸ ಸ್ವಾಮಿಗೆ ಈ ಜಿಲ್ಲೆಯಲ್ಲಿ ಅಪಾರ ಭಕ್ತರಿದ್ದಾರೆ. ಹಾಗೆಯೇ, ಈ ಜಿಲ್ಲೆಯಲ್ಲಿಯೂ ಶ್ರೀ ಬಾಲಾಜಿಯ ಪ್ರಮುಖವಾದ ದೇಗುಲಗಳಿವೆ. ಶ್ರಾವಣ ಮಾಸದಲ್ಲಿ ಈ ದೇಗುಲಗಳಲ್ಲಿ ನಡೆಯಬೇಕಾಗಿದ್ದ ಪೂಜಾ-ಕೈಂಕರ್ಯಗಳಿಗೆ ಈ ಸಲ ಕೊರೋನಾ ಸೋಂಕಿನ ಭೀತಿಯಿಂದಾಗಿ ಬ್ರೇಕ್ ಬಿದ್ದಿದೆ.
ಕೆಜಿಎಫ್ ತಾಲೂಕಿನ ಬಂಗಾರು ತಿರುಪತಿ ಹಾಗೂ ಮಾಲೂರು ತಾಲೂಕಿನ ಚಿಕ್ಕ ತಿರುಪತಿಗೆ ಪೌರಾಣಿಕ ಇತಿಹಾಸವಿದೆ. ಈ ಊರುಗಳಲ್ಲಿ ನೆಲೆಸಿರುವ ವೆಂಕಟೇಶ್ವರಸ್ವಾಮಿ ದೇಗುಲಗಳಿಗೆ ನೆರೆಯ ಆಂದ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಭಕ್ತರು ನಡೆದುಕೊಳ್ಳುತ್ತಾರೆ. ಅದ್ರಲ್ಲಿಯೂ ಶ್ರಾವಣ ಮಾಸದ ಪ್ರತೀ ಶನಿವಾರವೂ ಸಹಸ್ರಾರು ಇಲ್ಲಿ ನೆರೆಯುತ್ತಾರೆ. ಆದ್ರೆ, ಈ ಸಲ ಈ ಎರಡೂ ದೇಗುಲಗಳಿಗೂ ಶ್ರಾವಣದ ಸಂಭ್ರಮವಿಲ್ಲ. ಕೊರೋನಾ ವೈರಸ್ ಹರಡುವ ಆತಂಕದಿಂದಾಗಿ ಈ ದೇವಾಲಯಗಳನ್ನು ಜಿಲ್ಲಾಡಳಿತವು ಬಂದ್ ಮಾಡಿದೆ.
ಶ್ರಾವಣ ಮಾಸದ ವಿಶೇಷ ಪೂಜೆ-ಪುನಸ್ಕಾರಗಳಿಗೆ ಈ ಎರಡೂ ದೇಗುಲಗಳಲ್ಲಿ ಈ ಬಾರಿ ಅವಕಾಶವಿಲ್ಲದಿರುವುದು ಭಕ್ತರಲ್ಲಿ ಬೇಸರ ತಂದಿದೆ. ಕೊರೋನಾ ಸೋಂಕಿನ ಕಾರಣಕ್ಕಾಗಿ ಜಿಲ್ಲಾಡಳಿತದ ನಿರ್ಧಾರವನ್ನು ಸಹಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯವಾಗಿದೆ.
ಒಟ್ನಲ್ಲಿ, ಹಬ್ಬಗಳ ಸಾಲನ್ನು ಹೊತ್ತು ತಂದಿರುವ ಶ್ರಾವಣ ಮಾಸದ ಸಂತೋಷವು ಈ ವರ್ಷ ಇಲ್ಲವಾಗಿರುವುದು ಆಸ್ತಿಕರಲ್ಲಿ ಬೇಸರ ಮೂಡಿಸಿರುವುದು ಮಾತ್ರ ನಿಜ.
– ಆರ್.ಶ್ರೀನಿವಾಸಮೂರ್ತಿ, ಕೋಲಾರ.
ಶ್ರಾವಣ ಸಂಭ್ರಮಕ್ಕೂ ಕೊರೋನಾ ಅಡ್ಡಿ | ಚಿಕ್ಕ ತಿರುಪತಿ, ಬಂಗಾರು ತಿರುಪತಿ ದೇಗುಲಗಳಿಗೆ ಬೀಗ
TRENDING ARTICLES