ದಕ್ಷಿಣ ಕನ್ನಡ : ನಾಗರ ಪಂಚಮಿ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ. ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಅದರಲ್ಲೂ ನಾಗರಪಂಚಮಿ ದಿನವೇ ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಅನ್ನುವ ಆಡಳಿತ ಮಂಡಳಿಯ ಪ್ರಕಟಣೆ ಭಕ್ತರಲ್ಲಿ ನಿರಾಸೆ ಮೂಡಿಸಿದೆ. ಅಂದ್ಹಾಗೆ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ರಾಜ್ಯ ಹಾಗೂ ದೇಶದಾದ್ಯಂತ ಭಕ್ತ ಸಾಗರವೇ ಹರಿದು ಬರುತ್ತಿತ್ತು. ಆದರೇ ಇದೇ ಮೊದಲ ಬಾರಿಗೆ ನಾಗರಪಂಚಮಿಯಂದು ಭಕ್ತರಿಗೆ ದೇಗುಲಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲ. ಪ್ರಕಟಣೆ ಹೊರಡಿಸಿರುವ ದೇವಸ್ಥಾನ ಆಡಳಿತ ಮಂಡಳಿ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಬಾರಿ ಅರ್ಚಕರಿಂದ ಮಾತ್ರ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಗುತ್ತಿದೆ. ಇನ್ನೂ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ದೇಗುಲಕ್ಕೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಾಗರಪಂಚಮಿಯ ದಿನದ ಸೇವೆಗಳು, ಸೇವಾ ಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ. ನಾಗರ ಪಂಚಮಿಯ ಪ್ರಯುಕ್ತ ನಾಗ ತಂಬಿಲ, ಪಂಚಾಮೃತ, ಆಶ್ಲೇಷ ಬಲಿ ಮೊದಲಾದ ಯಾವುದೇ ಸೇವೆಗಳು ಇಲ್ಲ ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಕೊರೊನಾ ಸೋಂಕು ದೂರವಾದಲ್ಲಿ ಮುಂದಿನ ಷಷ್ಠಿಗೆ ನಾಗದೇವರ ಸೇವೆಗೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸುವುದಾಗಿ ಕುಡುಪು ಕ್ಷೇತ್ರದ ಅರವಿಂದ ತಂತ್ರಿ ‘ಪವರ್ ಟಿವಿ’ ಗೆ ತಿಳಿಸಿದ್ದಾರೆ.