ಶಿವಮೊಗ್ಗ : ವಿಧಾನಸೌಧದಲ್ಲಿ ಕೆಲಸ ಮಾಡಬೇಕಾದ ರಾಜ್ಯದ ಮುಖ್ಯಮಂತ್ರಿ ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ಕಳೆದ 6 ತಿಂಗಳಿಂದ ರೂಂ ಮಾಡಿಕೊಂಡು ಆಡಳಿತ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಮತದಾರರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ”ವಿಧಾನಸೌಧದಲ್ಲಿ ಕುಳಿತು ರಾಜ್ಯದ 6.5 ಕೋಟಿ ಜನರ ಕೆಲಸ ಮಾಡಬೇಕಿದ್ದ ಮುಖ್ಯಮಂತ್ರಿಗೆ ಈ ಕುರಿತು ಕೇಳಿದರೆ ‘ನನಗೂ ಖಾಸಗಿ ಜೀವನ’ ಇದೆ ಎನ್ನುವ ಉತ್ತರ ನೀಡುತ್ತಿದ್ದಾರೆ, ಹೋಟೆಲ್ ಕೊಠಡಿಗೆ ಅಧಿಕಾರಿಗಳನ್ನು ಕರೆಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಬರಗಾಲ ಪೀಡಿತ ಪ್ರದೇಶಕ್ಕೆ ಈವರೆಗೂ ಒಬ್ಬ ಮಂತ್ರಿ, ಅಧಿಕಾರಿ ತೆರಳಿ ಬಡವರ ಕಷ್ಟ ವಿಚಾರಿಸುವ ಕೆಲಸ ಮಾಡಿಲ್ಲ, ಉತ್ತರಕರ್ನಾಟಕದ ಜನ ಈ ಕುರಿತು ಕೇಳಿದರೆ ನೀವು ಓಟು ಕೊಟ್ಟವರಿಗೆ ಕೇಳಿರಿ ಎನ್ನುವ ಮಾತನ್ನಾಡುವ ಬೇಜವಾಬ್ದಾರಿ ವ್ಯಕ್ತಿ ರಾಜ್ಯ ಮುಖ್ಯಮಂತ್ರಿ ಆಗಿರುವುದು ದುರಂತ” ಅಂತ ಹೇಳಿದ್ರು.
”ಸರ್ಕಾರದಿಂದ ಹಗಲು ದರೋಡೆ ನಡೆಯುತ್ತಿದೆ, ಖಾಸಗಿ ಜೀವನ ಬೇಕಿರುವ ನೀವು ರಾಜ್ಯದ ಮುಖ್ಯಮಂತ್ರಿ ಯಾಕೆ ಆಗಿದ್ದೀರಿ” ಅಂತ ಯಡಿಯೂರಪ್ಪ ಕುಮಾರಸ್ವಾಮಿ ಅವ್ರನ್ನು ಪ್ರಶ್ನಿಸಿದ್ದಾರೆ,
”ಕಬ್ಬಿನ ಬಾಕಿಗಾಗಿ ಪ್ರತಿಭಟನೆ ಮಾಡುತ್ತಿದ್ದ ರೈತ ಮಹಿಳೆಗೆ ಅವಾಚ್ಯ ಶಬ್ಧ ಬಳಸಿರುವುದಕ್ಕೆ ನಾಚಿಗೆಯಾಗಬೇಕು. ಲೋಕಸಭೆ ಚುನಾವಣೆ ಗೆದ್ದಿದ್ದೇವೆ ಎನ್ನುವ ಭ್ರಮೆಯಲ್ಲಿ ಸಮ್ಮಿಶ್ರ ಸರಕಾರವಿದೆ. ರೈತರ ಸಾಲಮನ್ನಾ ಮಾಡುವ ಯಾವುದೇ, ಲಿಖಿತ ಆದೇಶ ಈವರೆಗೂ ಬ್ಯಾಂಕ್‍ಗೆ ನೀಡಿಲ್ಲ, ದಿನಕ್ಕೊಂದು ನಿಯಮದ ಮೂಲಕ ರೈತವಿರೋಧಿ ನೀತಿ ಅನುಸರಿಸಲಾಗುತ್ತಿದೆ” ಅದರ ವಿರುದ್ಧ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುತ್ತದೆ ಅಂತ ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ತಾಜ್ ವೆಸ್ಟೆಂಡ್ ನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ: ಬಿಎಸ್ ವೈ..!
TRENDING ARTICLES