ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳ ನಡುವೆಯೂ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಭರ್ಜರಿ ಮಳೆ ಸುರಿದಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಕೆರೆ, ಕಟ್ಟೆ, ಹಳ್ಳ ಕೊಳ್ಳಗಳು, ಚೆಕ್ ಡ್ಯಾಂ ಗಳು ತುಂಬಿ ತುಳುಕಾಡುತ್ತಿವೆ. ಇನ್ನು ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ನಿರಂತರ ಮಳೆಗೆ ತುಂಬಿ ಕೋಡಿಬಿದ್ದು ಕೆರೆಯ ನೀರು ರಸ್ತೆ ಮೇಲೆ ಹರಿಯುತ್ತಿರುವ ದೃಶ್ಯ ಕೂಡ ಕಂಡು ಬಂದಿದೆ. ಇನ್ನು ಹೊಳಲ್ಕೆರೆ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಸುರಿದ ಮಳೆಗೆ ಮಲ್ಲಿಕಾರ್ಜುನಪ್ಪ ಎಂಬುವರಿಗೆ ಸೇರಿದ ಮನೆ ಜಖಂ ಆಗಿ, ಮೇಲ್ಚಾವಣಿ ಕುಸಿದು ಮನೆಯಲ್ಲಾ ಜಲಾವೃತವಾಗಿದೆ ಎಂದು ವರದಿಯಾಗಿದೆ. ಚಳ್ಳಕೆರೆಯ ನಾಯಕನಹಟ್ಟಿ ಸುತ್ತ ಮುತ್ತ ಹಾಗೂ ತೋರೆಬೀರೆನಹಳ್ಳಿ ಸೇರಿದಂತೆ ಮಳೆರಾಯನ ಆರ್ಭಟಿಸಿದ್ದು ಹಳ್ಳಕೊಳ್ಳ, ಗುಂಡಿ ತುಂಬಿ ಹರಿಯುತ್ತಿವೆ. ಇತ್ತ ಹಿರಿಯೂರು ತಾಲ್ಲೂಕಿನ ಮಸ್ಕಲ್, ಬ್ಯಾಡರಹಳ್ಳಿ, ಹೂವಿನಹೊಳೆ, ಐಮಂಗಲ ಹೋಬಳಿಯ ಕೆಲವು ಭಾಗದಲ್ಲಿ ಹಲವೆಡೆ ಮಳೆಯಾಗಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ಹೊಲಗಳಲ್ಲಿನ ಮಣ್ಣು ಕೊರಕಲು ಉಂಟಾಗಿದೆ. ಹೊಲದಲ್ಲಿ ಶೇಂಗಾ ಬೀಜದ ಮೊಳಕೆ ಮತ್ತು ಚಿಗುರು ಮಳೆಗೆ ಸಿಲುಕಿದ್ದು, ರೈತರ ಜಮೀನುಗಳು ಮಳೆ ನೀರಿನಿಂದ ಜಲಾವೃತವಾಗಿ ಕೆರೆಯಂತಾಗಿರುವ ದೃಶ್ಯ ಕಂಡುಬಂದಿದೆ.