ಹಾಸನ : ನಮ್ಮ ರಕ್ತ ಸಂಬಂಧಗಳನ್ನ ಕಳೆದುಕೊಳ್ಳೋ ಹಂತಕ್ಕೆ ನಾವು ತಲುಪಿದ್ದೇವೆ, ಇದು ಯಾರ ನತದೃಷ್ಟತನವೋ ಗೊತ್ತಾಗುತ್ತಿಲ್ಲ – ಸಚಿವರ ಸಭೆಯಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಭಾವುಕರಾಗಿ ಮಾತನಾಡಿದರು. ಹಾಸನ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ, ನಾನು ನಮ್ಮನೆಯ ಎಲ್ಲರಿಗು ಪರೀಕ್ಷೆ ಮಾಡಿಸಿದೆ, ಪಾಪ ನನ್ನ ಪತ್ನಿ ಮನೆಯಿಂದ ತೋಟ, ತೋಟದಿಂದ ಮನೆಗೆ ಹೋಗುತ್ತಿದ್ದರು. ಕೊರೊನಾ ಬಂದವರನ್ನ ಎಷ್ಟು ಕೀಳುಮಟ್ಟದಲ್ಲಿ ನೋಡುತ್ತಾರೆ ಎನ್ನೋ ನೋವನ್ನ ನಾನು ಸ್ವತಃ ಅನುಭವಿಸಿದ್ದೇನೆ, ನಮ್ಮ ಸರ್ಕಾರದ ನಿರ್ಧಾರದಿಂದ ಇಂದು ಯಡವಟ್ಟಾಗಿದೆ. ಸಾಮಾಜಿಕ ಅಂತರ ಇಲ್ಲದಿದ್ದರೆ ಸೋಂಕು ಬರುತ್ತೆ ಅಂತೀರ, ಲಾಕ್ ಡೌನ್ ಬೇಡಾ ಅಂತೀರಾ ಇದು ಹೇಗೆ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.
ಸರ್ಕಾರ ಗೊಂದಲದ ನಿರ್ಧಾರದಿಂದಲೇ ಇಷ್ಟು ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ನಮ್ಮ ಮಾತು ಬೇಡಾ ಅಂದ್ರೆ ಬಿಡಿ, ಎಲ್ಲಾ ನೀವೇ ಮಾಡಿ, ನಾವು ಹೇಗೋ ಜನರನ್ನ ಮನವೊಲಿಸಿ ಲಾಕ್ ಡೌನ್ ಮಾಡಿದ್ರೆ ಅದಕ್ಕೂ ಅಡ್ಡಗಾಲು ಹಾಕ್ತೀರಾ, ಸಿಎಂ ರಾಜ್ಯದಲ್ಲಿ ಎಲ್ಲೂ ಲಾಕ್ ಡೌನ್ ಇಲ್ಲಾ ಅಂತಾರೆ, ನಮ್ಮ ವ್ಯಾಪ್ತಿಯಲ್ಲಿ ತೀರ್ಮಾನ ಮಾಡಲು ನಮಗೆ ಅಧಿಕಾರ ಕೊಡಿ, ಎಂಟು ದಿನ ಲಾಕ್ಡೌನ್ ಮಾಡ್ತೀರಾ ಆಮೇಲೆ ಬೇಡಾ ಅಂತೀರಾ, ಜನ ನಿಮ್ಮನೆ ಬಾಗಿಲಿಗೆ ಬರಲ್ಲ, ನಮ್ಮನೆ ಮುಂದೆ ಬಂದು ನಾನು ಓಟ್ ಹಾಕಿರದು ನಿಂಗೆ ನೀನೇ ಕೆಲಸ ಮಾಡು ಅಂತಾರೆ, ಪರಿಹಾರ ಘೋಷಣೆ ಮಾಡಿದ್ದೀರಾ.. ಯಾರಿಗೆ ಬಂದಿದೆ, ಎಲ್ಲಾ ನಿರ್ಧಾರ ನೀವೆ ತೆಗೆದುಕೊಂಡ್ರೆ ನಮಗೆ ಏನೂ ಅಧಿಕಾರ ಇಲ್ವಾ ಎಂದರು.