ಬಾಗಲಕೋಟೆ : ಕಳೆದ 5 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯೋರ್ವನ ಶವವನ್ನು ಕದ್ದೊಯ್ದಿರುವ ವಿಚಿತ್ರ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಭೀಮನ ಅಮಾವಾಸ್ಯೆ ದಿನ ನಡೆದಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ರೂಗಿ ಗ್ರಾಮದಲ್ಲಿ ಹೂತಿದ್ದ ಶವ ಹೊತ್ತೊಯ್ದ ಘಟನೆ ಇಂದು ಬೆಳಕಿಗೆ ಬಂದಿದೆ.
ರೂಗಿ ಗ್ರಾಮದ ರಾಮಣ್ಣ ತುಮ್ಮರಮಟ್ಟಿ 5 ತಿಂಗಳ ಹಿಂದೆ ಶಿವರಾತ್ರಿ ಅಮವಾಸ್ಯೆ ದಿನ ಫೆಬ್ರವರಿ 21ರಂದು ಮೃತ ಪಟ್ಟಿದ್ದು, ಫೆಬ್ರವರಿ 22 ರಂದು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮೃತ ವ್ಯಕ್ತಿ ಕ್ಯಾನ್ಸರ್ನಿಂದ ಬಳಲಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಇನ್ನೂ ಜುಲೈ 21ರ ನಾಗರ(ಭೀಮನ) ಅಮಾವಾಸ್ಯೆ ದಿನ ದುಷ್ಕರ್ಮಿಗಳು ವಾಮಾಚಾರ, ನಿಧಿಗಾಗಿ ಹೂತಿದ್ದ ಶವ ಹೊತ್ತೊಯ್ದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕ್ಯಾನ್ಸರ್ನಿಂದ ಮೃತಪಟ್ಟಿದ್ದ ರಾಮಣ್ಣ ತುಮ್ಮರಮಟ್ಟಿ ಅವರ ಅಂತ್ಯಸಂಸ್ಕಾರ ಮೃತನ ಹೊಲದಲ್ಲೇ ಮಾಡಲಾಗಿತ್ತು. ಶವ ಸಂಸ್ಕಾರವಾಗಿ 5 ತಿಂಗಳು ಕಳೆದಿರುವ ಹಿನ್ನೆಲೆ ಶವ ಅಸ್ಥಿಪಂಜರ ವಾಗಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಶವ ತೆಗೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗ್ತಿದೆ. ದುಷ್ಕರ್ಮಿಗಳು ಅಮಾವಾಸ್ಯೆಯ ರಾತ್ರಿ ಶವ ವಾಮಾಚಾರ, ನಿಧಿಗಾಗಿ ಹೊತ್ತೊಯ್ದಿರಬಹುದೆಂಬ ಅನುಮಾನ ಸ್ಥಳೀಯರಲ್ಲಿ ಮೂಡಿದ್ದು, ರೂಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ..