ಚಿತ್ರದುರ್ಗ : ಗ್ರೀನ್ ಝೋನ್ ನಲ್ಲಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಬೆರಳೆಣಿಕೆಯಷ್ಟಿದ್ದ ಕೊರೋನಾ ಪಾಸಿಟಿವ್ ಪ್ರಕರಣಗಳು ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದಂತೆ ಹೊರರಾಜ್ಯಗಳಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡು 50ರ ಆಸುಪಾಸು ತಲುಪಿತ್ತು.
ಲಾಕ್ ಡೌನ್ ಸಂಪೂರ್ಣ ತೆರವಾಗುತ್ತಲೇ ಬಸ್ ಸಂಚಾರ ಆರಂಭವಾದ ಬಳಿಕ ಬೇರೆ ಬೇರೆ ಜಿಲ್ಲೆಗಳಿಂದ ಬಂದವರಲ್ಲಿ, ಅದರಲ್ಲೂ ಮಹಾನಗರಿ ಬೆಂಗಳೂರಿಗೆ ಹೋಗಿ ಬಂದವರಲ್ಲೇ ಹೆಚ್ಚಾಗಿ ಕೊರೋನಾ ಸೋಂಕು ಹರಡಲು ಶುರುವಾಗಿದ್ದು, ಇದೀಗ ಜಿಲ್ಲೆಯಲ್ಲಿ 270 ಪ್ರಕರಣಗಳು ಈಗಾಗಲೇ ಧೃಡಪಟ್ಟಿದೆ. ಇಂದು 300ರ ಗಡಿ ಮುಟ್ಟುವ ಸಾಧ್ಯತೆ ಇದೆ. ಈ ನಡುವೆ ಆರೋಗ್ಯ ಇಲಾಖೆಯ ನಿರ್ಲಕ್ಷತೆಯಿಂದಾಗಿ ಸೋಂಕಿತರು ಮನೆಯಲ್ಲೇ ನರಳಾಡುವಂತಾಗಿದೆ.
ಎ. ಸಿಂಪ್ಟಮ್ಯಾಟಿಕ್ ಎಂಬ ಕಾರಣ ನೀಡುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೋಂಕಿತರನ್ನು ಹೋಂ ಐಸೋಲೇಷನ್ ಮಾಡುತ್ತಿದ್ದಾರೆ. ಹೀಗಾಗಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಜಿಲ್ಲಾಡಳಿತದ ಕಚೇರಿಯಲ್ಲಿ ಎಡಿಸಿ ಕಾರು ಚಾಲಕನಿಗೆ ಕೊರೋನಾ ಸೋಂಕು ಪತ್ತೆಯಾದಾಗ ಕಚೇರಿಯನ್ನು ಸೀಲ್ ಡೌನ್ ಮಾಡದ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಇದೀಗ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನಿಗೂ ಕೊರೊನಾ ಸೋಂಕು ತಗುಲುವಂತಾಗಿದೆ. ಡಿಸಿ ಕಾರು ಚಾಲಕ ಹೋಂ ಕ್ವಾರೆಂಟೈನ್ ನಲ್ಲಿದ್ದಾನೆ, ಅಷ್ಟು ಮಾತ್ರವಲ್ಲದೇ ಜಿಲ್ಲೆಯ ಹತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಪರಿಣಾಮ 350 ಮಂದಿ ಪೊಲೀಸರು ಕ್ವಾರೆಂಟೈನ್ ಗೆ ಒಳಗಾಗಿದ್ದು, ಖುದ್ದು ಎಸ್ ಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹೆಚ್ಚುವರಿ ಹೋಂಗಾರ್ಡ್ ಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ. ಆರಂಭದಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರ ಇದ್ದ ಕೊರೋನಾ ಮಹಾಮಾರಿ ಇದೀಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿರೋದ್ರಿಂದ ಇಡೀ ಜಿಲ್ಲೆಯ ಜನರು ಭೀತಿಗೊಳಗಾಗಿದ್ದಾರೆ. ಆದರೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಇದೀಗ ಕೊರೋನಾ ಕಂಟ್ರೋಲ್ ತಪ್ಪುತ್ತಿದ್ದು, ಜಿಲ್ಲೆಯಲ್ಲಿ ಕೊರೋನಾ ನಾಗಲೋಟ ಮಿತಿ ಮೀರುವ ಸಾಧ್ಯತೆ ಹೆಚ್ಚಾಗಿದೆ.