ಶಿವಮೊಗ್ಗ : ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಅಡ್ಮಿಟ್ ಆಗುವುದಕ್ಕಿಂತ ಹೆಚ್ಚು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಸಂತಸಕ್ಕೆ ಕಾರಣವಾಗಿದೆ. ಹೌದು, ಈಗಾಗಲೇ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ಸೋಂಕಿತರಿಗೆ ಒಳ್ಳೆಯ ಸೌಲಭ್ಯಗಳಿಂದ, ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮ ಸೌಲಭ್ಯಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ. ಈಗಾಗಲೇ, ಇಲ್ಲಿಂದ ಬಿಡುಗಡೆಗೊಂಡಿರುವ ಸೋಂಕಿತರು, ಆಸ್ಪತ್ರೆ ಮತ್ತು ಜಿಲ್ಲಾಡಳಿತದ ವ್ಯವಸ್ಥೆ ಕುರಿತಂತೆ, ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಹೊತ್ತಲ್ಲೇ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಶಿವಮೊಗ್ಗ ಜಿಲ್ಲಾಡಳಿತ ಇದೀಗ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿನ ಸೌಲಭ್ಯಗಳ ತಪಾಸಣೆಗೆ ವಿಡಿಯೋ ಕಾಲ್ ಮೊರೆ ಹೋಗಿದೆ. ಎಸ್, ಮೆಗ್ಗಾನ್ ಕೋವಿಡ್-19 ಆಸ್ಪತ್ರೆ ಹಾಗೂ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಲ್ಲಿರುವ ಕೊರೋನಾ ಪಾಸಿಟಿವ್ ವ್ಯಕ್ತಿಗಳೊಂದಿಗೆ ಪ್ರತಿನಿತ್ಯ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲಭ್ಯ ಸೌಲಭ್ಯಗಳ ಕುರಿತು ಅವರ ಅನಿಸಿಕೆಗಳನ್ನು ಪಡೆಯಲಾಗುತ್ತಿದೆ. ಊಟ ಉಪಾಹಾರದ ವ್ಯವಸ್ಥೆ, ರೋಗ ಲಕ್ಷಣ ಇರುವವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಸೌಲಭ್ಯ, ಶುಚಿತ್ವ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೊರೋನಾ ಪಾಸಿಟಿವ್ ವ್ಯಕ್ತಿಗಳಿಂದ ನೇರವಾಗಿ ಅಭಿಪ್ರಾಯ ಪಡೆಯಲು ಇದರಿಂದ ಸಾಧ್ಯವಾಗುತ್ತಿದೆ. ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಈ ವಿಡಿಯೋ ಕಾಲ್ ಗಳನ್ನು ಮಾಡುವ ಮೂಲಕ ಕೊರೋನಾ ಸೋಂಕಿತರೊಂದಿಗೆ ಚರ್ಚಿಸಿ ಅವರಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದಾರೆ. ಇದು ಜಿಲ್ಲೆಯ ಮಟ್ಟಿಗೆ ಉತ್ತಮ ಹೆಜ್ಜೆ ಎಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲದೇ, ಮೆಗ್ಗಾನ್ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಾಗುವ ಪ್ರತಿಯೊಬ್ಬರಿಗೂ ಅಹವಾಲುಗಳನ್ನು ಹಾಗೂ ಅನಿಸಿಕೆಗಳನ್ನು ಬರೆಯಲು ಅರ್ಜಿ ನಮೂನೆಯನ್ನು ನೀಡಲಾಗುತ್ತಿದ್ದು, ಕುಂದು ಕೊರತೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಉತ್ತಮ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.