ಹುಬ್ಬಳ್ಳಿಯ ನವನಗರದ ಕರ್ನಾಟಕ ವೃತ್ತದಲ್ಲಿ ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ಮಾರ್ಗದಲ್ಲಿ ಇಂದು ಅನಿಲ ಸೋರಿಕೆಯಾಗಿ ಇಡಿ ಬಡಾವಣೆಯ ಜನ್ರನ್ನ ಆತಂಕಕ್ಕೀಡುಮಾಡಿತ್ತು. ಬಳಿಕ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ ಜನ, ತಕ್ಷಣ ಸಮೀಪದ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದ್ರು. ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅನಿಲ ಹರಡದಂತೆ, ಫೋಮ್ ಸಿಂಪಡಿಸಿ ಭಾರಿ ಅನಾಹುತ ತಪ್ಪಿಸಿದ್ರು. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಅನಿಲ ಪೂರೈಸುವ ಅದಾನಿ ಗ್ಯಾಸ ಪೈಪ್ ಲೈನ್ ಪ್ರೈವೇಟ್ ಲಿಮಿಟೆಡ್ ಅಧಿಕಾರಿಗಳನ್ನು ಹಾಗೂ ಪಾಲಿಕೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು
ನವನಗರದಲ್ಲಿ ಒಳಚರಂಡಿ ಲೈನ್ ದುರಸ್ಥಿ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿ ಇಂದು ತೊಡಗಿದ್ರು. ಇದೇ ವೇಳೆ ಗ್ಯಾಸ್ ಪೈಲ್ ಲೈನ್ ಗೆ ಹೊಡೆತ ಬಿದ್ದು ಸೋರಿಕೆ ಉಂಟಾಗಿತ್ತು.ಇದ್ರಿಂದ ಸಾಕಷ್ಟು ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ. ನೀರಿನ ಕಾರಂಜಿ ಚಿಮ್ಮುವ ಹಾಗೆ ಅನಿಲ ಆಕಾಶದತ್ತ ಹಾರತೊಡಗಿತ್ತು. ಕೆಲವೇ ನಿಮಿಷಗಳಲ್ಲಿ ಗಾಳಿಯಲ್ಲಿ ಅನಿಲ ಸೇರಿಕೊಂಡಿತ್ತು. ಸ್ಥಳೀಯರು ತಕ್ಷಣಕ್ಕೆ ವಿದ್ಯುತ್ ಲೈನ್ ಬಂದ್ ಮಾಡಿಸಿ, ಬೆಂಕಿ ಕಡ್ಡಿ ಗೀರದಂತೆ, ಮೊಬೈಲ್ ಫೋನ್ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಳ ಸಿಬ್ಬಂದಿ ಅನಿಲ ಸೋರಿಕೆ ತಡೆಯುವಲ್ಲಿ ಯಶಸ್ವಿಯಾದ್ರು. ಇನ್ನು ಇಷ್ಟೆಲ್ಲ ನಡೆದ ಮೇಲೆ ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳು ಹಾಗೂ ಅದಾನಿ ಗ್ಯಾಸ್ ಕಂಪನಿಯ ಅಧಿಕಾರಿಗಳು ಪರಸ್ಪರ ಮಾತಿನ ಚಕಮಕಿಗೆ ಇಳಿದ್ರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸೋದನ್ನ ಬಿಟ್ಟು, ಪರಸ್ಪರ ಕೆಸರೆರಚಾಡತೊಡಗಿದ್ರು. ಇನ್ನು ಇದೇ ವೇಳೆ ಮಾತಿಗಿಳಿದ ಪಾಲಿಕೆ ಅಧಿಕಾರಿಗಳು, ಅದಾನಿ ಗ್ಯಾಸ್ ಕಂಪನಿಯವರು ಪೈಪ್ ಲೈನ್ ಅಳವಡಿಕೆಗೆ ಪರವಾನಗಿ ಪಡೆದಿಲ್ಲ ಎಂದು ಆರೋಪಿಸಿದ್ರು. ಇದಕ್ಕೆ ಉತ್ತರಿಸಿದ ಗ್ಯಾಸ್ ಕಂಪನಿಯವರು, ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಿದ್ದು, ಪಾಲಿಕೆಯ ನಿರ್ಲಕ್ಷದಿಂದ ಈ ದುರ್ಘಟನೆ ನಡೆದಿದೆ ಅಂತ ಉತ್ತರ ನೀಡಿದ್ರು. ಇದಕ್ಕೆ ಧ್ವನಿಗೂಡಿಸಿದ ಸ್ಥಳೀಯರು, ಅದಾನಿ ಗ್ಯಾಸ್ ನಿರ್ವಹಣೆ ಮಾಡುವವರನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ್ರು.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತವೆ ನಡೆದು ಹೋಗ್ತಾ ಇತ್ತು.ಅದೃಷ್ಟವಶಾತ ಯಾವುದೆ ಅನಾಹುತ ಸಂಭವಿಸಿಲ್ಲ, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.