ಕೋಲಾರ : ದಿವ್ಯಾಂಗರ ದೈಹಿಕ ಸ್ಥಿತಿಗೆ ಅನುಗುಣವಾಗಿ ಸೌಕರ್ಯ ಒದಗಿಸಬೇಕು ಅನ್ನುತ್ತೆ ಸರ್ಕಾರದ ನಿಯಮ. ಆದ್ರೆ, ಕೋಲಾರದ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ದಿವ್ಯಾಂಗರಿಗೆ ಕಷ್ಟ ಕೊಡಲು ಸಿದ್ದವಾಗಿರುವ ಆರೋಪ ಎದುರಾಗಿದೆ. ಯಂತ್ರಚಾಲಿತ ಸ್ಕೂಟರ್ಗಳನ್ನು ದಿವ್ಯಾಂಗರಿಗೆ ಕೊಡುವ ಯೋಜನೆಯಲ್ಲಿ ಈ ಆರೋಪವು ಮೇಲ್ನೋಟಕ್ಕೆ ನಿಜವೆನಿಸುತ್ತದೆ. ಯಾವುದೀ ಆರೋಪ, ಏನಿದರ ವಿವರ ಅನ್ನೋದನ್ನು ನೋಡೋಣ ಬನ್ನಿ.
ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರದ ಹಲವಾರು ಯೋಜನೆಗಳಿವೆ. ಈ ಪೈಕಿ ಕಾಲು ಸ್ವಾಧೀನ ಇಲ್ಲದಿರುವರಿಗೆ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಕೊಡುವ ಯೋಜನೆಯೂ ಒಂದಾಗಿದೆ. ಈ ಯೋಜನೆಯ ಅನ್ವಯ ಕೋಲಾರ ಜಿಲ್ಲಾ ಪಂಚಾಯಿತ್ನ ಅನುದಾನದಲ್ಲಿ ಕಳೆದ ಸಾಲಿಗಾಗಿ 26 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಇಲಾಖೆಯಿಂದ ಖರೀದಿ ಮಾಡಲಾಗಿದೆ. ಖರೀದಿ ಮಾಡಲಾದ ಸ್ಕೂಟರ್ಗಳು ಹಾಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆ ಇದೀಗ ಅಧಿಕಾರಿಗಳ ವಿರುದ್ದ ಆಕ್ಷೇಪ ವ್ಯಕ್ತವಾಗುತ್ತಿದೆ.
ಕಾಲು ಊನಗೊಂಡಿರುವ ದಿವ್ಯಾಂಗರಿಗೆ ಯಂತ್ರಚಾಲಿತ ಸ್ಕೂಟರ್ಗಳನ್ನು ಕೊಡುವ ಯೋಜನೆಗಾಗಿ ಕೋಲಾರ ಜಿಲ್ಲೆಯಲ್ಲಿ ಈವರೆಗೂ ಫಲಾನುಭವಿಗಳ ಆಯ್ಕೆಯೇ ಆಗಿಲ್ಲ. ಆದ್ರೆ, ರಾಜ್ಯ ಸರ್ಕಾರಕ್ಕೆ ಅನುದಾನ ಹಿಂದಕ್ಕೆ ಹೋಗಬಾರದು ಅನ್ನೋ ಕಾರಣವನ್ನು ಕೊಟ್ಟು, ಈಗಾಗಲೇ 26 ಸ್ಕೂಟರ್ಗಳನ್ನು ಖರೀದಿಸಿ ಆರು ತಿಂಗಳಿನಿಂದ ಬಿಸಿಲು-ಮಳೆಯಲ್ಲಿ ನಿಲ್ಲಿಸಿಕೊಳ್ಳಲಾಗಿದೆ. ಫಲಾನುಭವಿಗಳ ಆಯ್ಕೆ ನಡೆಸದೆ ಸ್ಕೂಟರ್ಗಳ ಖರೀದಿ ನಡೆಸಿರುವ ಕ್ರಮವು ರಾಜ್ಯ ಸರ್ಕಾರದ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗಿದೆ.
ದಿವ್ಯಾಂಗ ಫಲಾನುಭವಿಗಳು ಬರವಣಿಗೆಯಲ್ಲಿ ಬಯಸುವ ಪೆಟ್ರೋಲ್ ಟ್ಯಾಂಕ್ ಸೌಕರ್ಯದ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸಲು ಸರ್ಕಾರದ ನಿಯಮವು ಸ್ಟಷ್ಟವಾಗಿ ಸೂಚಿಸಿದೆ. ಆದ್ರೆ, ಸೀಟಿನ ಕೆಳಗೆ ಪೆಟ್ರೋಲ್ ಟ್ಯಾಂಕ್ ಇರುವ ಮಾದರಿಯ ಸ್ಕೂಟರನ್ನು ಖರೀದಿಸುವ ಮೂಲಕ ಕಾಲು ಸ್ವಾಧೀನವಿಲ್ಲದಿರುವ ಫಲಾನುಭವಿಯು ಕಷ್ಟಪಡುವಂತ ಸನ್ನಿವೇಶ ಸೃಷ್ಟಿಸಲಾಗಿದೆ. ಫಲಾನುಭವಿಯ ಒಪ್ಪಿಗೆಯು ಇಲ್ಲದೆಯೇ ಏಕಪಕ್ಷೀಯವಾಗಿ ಸ್ಕೂಟರ್ ಖರೀದಿ ನಡೆಸಿರುವುದು ಸರ್ಕಾರದ ಮಾರ್ಗಸೂಚಿಯನ್ನು ಧಿಕ್ಕರಿಸಿದಂತಾಗಿದೆ. ಈ ಬಗ್ಗೆ ಸ್ಕೂಟರ್ ಅರ್ಜಿದಾರರಲ್ಲಿ ಅತೃಪ್ತಿಯಿದ್ದರೆ, ಸ್ಪಷ್ಟನೆ ಕೊಡಬೇಕಾದ ಅಧಿಕಾರಿಗಳು ಕೈಗೆ ಸಿಗದೆ ಓಡಾಡುತ್ತಿದ್ದಾರೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.