ಕುವೈಟ್ : ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೊಬ್ಬನ ಪ್ರಾಣ ರಕ್ಷಣೆಗೆ ಧಾವಿಸಿ ಮಂಗಳೂರಿನ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಕುವೈಟ್ ರಾಷ್ಟ್ರದಲ್ಲಿ ನಡೆದಿದೆ. ಕಳೆದ ಒಂದೂವರೆ ವರುಷದಿಂದ ಕುವೈಟ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ, ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ ಮೃತಪಟ್ಟ ಯುವಕನಾಗಿದ್ದಾನೆ.
29 ರ ಹರೆಯದ ಅನೀಸ್, ಶನಿವಾರ ಸಂಜೆ ಕುವೈಟ್ ನ ಸಾಲ್ಮಿಯಾ ಬೀಚ್ ಗೆ ತನ್ನ ಸ್ನೇಹಿತರ ಜೊತೆಗೂಡಿ ಈಜಲೆಂದು ತೆರಳಿದ್ದರು. ತಮ್ಮ ಈಜು ಮುಗಿಸಿ ದಡ ಸೇರುತ್ತಿದ್ದಂತೆ ಈಜಿಪ್ಟ್ ನ ನಾಗರಿಕನೊಬ್ಬ ಸಮುದ್ರ ಮಧ್ಯೆಯಿಂದ ರಕ್ಷಣೆಗಾಗಿ ಮೊರೆಯಿಟ್ಟಿದ್ದನ್ನ ಕಂಡಿದ್ದಾರೆ. ಇದನ್ನ ಕಂಡ ತಕ್ಷಣವೇ ಅನೀಸ್, ಅದಾಗಲೇ ಈಜಿ ದಡ ಸೇರಿದ್ದರೂ ಮತ್ತೆ ವಾಪಾಸ್ ಸಮುದ್ರಕ್ಕೆ ಹಾರಿ ಆತನ ರಕ್ಷಣೆಗೆ ಮುಂದಾಗಿದ್ದಾರೆ. ದುರಾದೃಷ್ಟವಶಾತ್ ಸಮುದ್ರದ ಅಲೆಗೆ ಸಿಕ್ಕ ವ್ಯಕ್ತಿಯನ್ನ ಸಂಕಷ್ಟದಿಂದ ಪಾರು ಮಾಡಿದರೂ, ರಕ್ಷಿಸಲು ಹೋದ ಅನೀಸ್ ಮಾತ್ರ ಸ್ನೇಹಿತರ ಕಣ್ಣೆದುರೇ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಶನಿವಾರ ಸಂಜೆ ಭಾರತೀಯ ಕಾಲಮಾನ ರಾತ್ರಿ 8.30 ಸಮಯಕ್ಕೆ ನಡೆದಿದ್ದು, ಕುವೈಟ್ ನ ನೇವಿ ಹಾಗೂ ಕೋಸ್ಟ್ ಗಾರ್ಡ್ ನಿರಂತರ ಹುಡುಕಾಟದ ಬಳಿಕ ಭಾನುವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಕೊರೊನಾ ಬಿಕ್ಕಟ್ಟು ಹಾಗೂ ಇನ್ನಿತರ ಪ್ರಕ್ರಿಯೆ ವಿಳಂಬ ಸಾಧ್ಯತೆ ಹಿನ್ನಲೆ ಕುಟುಂಬಿಕರು ಕುವೈಟ್ ನಲ್ಲೇ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು