ಮಂಗಳೂರು : ತಾಯಿಯಾದವಳು ತನ್ನ ಕೊನೆಗಾಲಕ್ಕಾಗಲೀ ಅನ್ನೋ ಆಸೆಯಿಂದ ಮಕ್ಕಳನ್ನ ಮುದ್ದಾಗಿ ಸಾಕಿರ್ತಾಳೆ.. ಆದರೆ ಮಕ್ಕಳು ಮಾತ್ರ ದೊಡ್ಡವರಾಗುತ್ತಲೇ ತಾಯಿಯ ತ್ಯಾಗ, ಪ್ರೀತಿ, ಮಮತೆ ಎಲ್ಲವನ್ನೂ ಮರೆತು ಬಿಡುತ್ತಾರೆ. ಮಾತ್ರವಲ್ಲದೇ ತಾಯಿಯ ಪಾಲಿಗೆ ಕೆಲವು ಮಕ್ಕಳು ‘ವಿಲನ್’ ಆಗಿ ಬದಲಾಗುತ್ತಾರೆ. ಈ ರೀತಿ ತಾಯಿಯ ಪಾಲಿಗೆ ವಿಲನ್ ಆದ ಮಗ ಮತ್ತು ಮೊಮ್ಮಗ ಜೈಲು ಸೇರುವಂತೆ ‘ಪವರ್ ಟಿವಿ’ ಮಾಡಿದೆ.
ಅಂದಹಾಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲುವಿನಲ್ಲಿ ವೃದ್ಧೆ ಅಪ್ಪಿ ಶೆಟ್ಟಿ ಎಂಬವರ ಮೇಲೆ ಅವರ ಮಗ ಶ್ರೀನಿವಾಸ್ ಶೆಟ್ಟಿ ಹಾಗೂ ಆತನ ಪತ್ನಿಯ ಅಕ್ಕನ ಮಗ ಪ್ರದೀಪ್ ಶೆಟ್ಟಿ (ವೃದ್ಧೆಗೆ ಸಂಬಂಧ ದೃಷ್ಟಿಯಲ್ಲಿ ಮೊಮ್ಮಗ) ಅತ್ಯಂತ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ಪ್ರದೀಪ್ ಶೆಟ್ಟಿ ವೃದ್ಧೆ ಅನ್ನೋದನ್ನೂ ನೋಡದೆ ಅಜ್ಜಿಯ ಕೆನ್ನೆ ಮೇಲೆ ಹಲ್ಲೆ ನಡೆಸಿ, ಆಕೆ ಧರಿಸಿದ್ದ ನೈಟಿಯಿಂದ ಎಳೆದೆತ್ತಿ ಬಿಸಾಡಿರೋ ದೃಶ್ಯಗಳೆಲ್ಲ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ವೃದ್ಧೆಯ ಮಗ ಶ್ರೀನಿವಾಸ ಶೆಟ್ಟಿ ಕೂಡಾ ಸಾಥ್ ನೀಡಿದ್ದು, ನೋವಿನಿಂದ ಚೀರುತ್ತಿದ್ದ 80 ರ ಹರೆಯದ ತಾಯಿ ಮೇಲೆಯೇ ಬಾಟಲಿಯ ನೀರನ್ನ ಚೆಲ್ಲಿ ಅಮಾನುಷವಾಗಿ ವರ್ತಿಸಿದ್ದಾನೆ. ಇದೆಲ್ಲವನ್ನ ಅಪ್ಪಿ ಶೆಟ್ಟಿ ಅವರ ಕಿರಿಯ ಮಗ ರವಿಚಂದ್ರ ಅವರ ಪುತ್ರ ಚಿತ್ರೀಕರಿಸಿಕೊಂಡು, ತನ್ನ ತಂದೆ ಗಮನಕ್ಕೆ ತಂದಿದ್ದ. ಇದರಿಂದ ಎಚ್ಚೆತ್ತುಕೊಂಡ ಕಿರಿಯ ಮಗ ರವಿಚಂದ್ರ ಈ ಅಮಾನುಷ ಕೃತ್ಯವನ್ನ ಖುದ್ದು ತಾನೇ ‘ಪವರ್ ಟಿವಿ’ ಗಮನಕ್ಕೆ ತಂದಿದ್ದಾರೆ..
ಇತ್ತ ಸುದ್ದಿಯಾಗುತ್ತಲೇ, ಅತ್ತ ಸು-ಮೊಟೊ ಕೇಸ್!
ಇತ್ತ ‘ಪವರ್ ಟಿವಿ’ ವೃದ್ಧೆ ಮೇಲಿನ ದೌರ್ಜನ್ಯ ವರದಿ ಬಿತ್ತರಿಸುತ್ತಲೇ ಅತ್ತ ಬೆಳ್ತಂಗಡಿ ಠಾಣೆಯ ಪೊಲೀಸರು ದೂರು ಬರೋದನ್ನೂ ಕಾಯದೇ ಆರೋಪಿಗಳಾದ ಶ್ರೀನಿವಾಸ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿಯನ್ನ ದಸ್ತಗಿರಿ ನಡೆಸಿದ್ದಾರೆ. ಐಪಿಸಿ ಸೆಕ್ಷನ್ 323, 504 ಹಾಗೂ ಹಿರಿಯ ನಾಗರಿಕರ ಕಾಯ್ದೆ 2007 ರ ಅನ್ವಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಫೇಸ್ಬುಕ್ ನಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ವೃದ್ಧೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಗುರುವಾಯನಕೆರೆಯ ಸಾಯಿರಾಂ ಫ್ರೆಂಡ್ಸ್ ಸದಸ್ಯರು ಸೇರಿ ಅಪ್ಪಿ ಶೆಟ್ಟಿ ಅವರನ್ನ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದಾರೆ.
ಒಟ್ಟಿನಲ್ಲಿ ‘ಪವರ್ ಟಿವಿ’ ವರದಿ ಬಿತ್ತರಿಸುತ್ತಿದ್ದಂತೆ ಘಟನೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇದೀಗ ಬಂಧಿತರಾದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.