ಡ್ರೋನ್ ತಯಾರಿಸಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೇನೆ ಎಂದು ಹೇಳಿ ಅಪಹಾಸ್ಯಕ್ಕೀಡಾಗುತ್ತಿರುವ ಡ್ರೋನ್ ಪ್ರತಾಪ್ ವಿರುದ್ಧ ಇದೀಗ ಶಿವಮೊಗ್ಗದ ವಕೀಲರೊಬ್ಬರು ದೂರು ನೀಡಿದ್ದಾರೆ. ಮಂಡ್ಯದ ಡ್ರೋನ್ ಪ್ರತಾಪ್ ಎಂದೇ ಹೆಸರುವಾಸಿಯಾಗಿದ್ದ ಈ ಯುವಕನಿಗೆ ಕೊರೋನಾ ಕಾಟಕ್ಕಿಂತಲೂ ಕಾಗೆ ಹಾರಿಸಿದ್ದೆ ಹೆಚ್ಚು ಕಾಟವಾಗಿ ಪರಿಣಮಿಸಿದೆ. ಅಂದಹಾಗೆ, ಶಿವಮೊಗ್ಗದ ಸಾಗರದ ಕೆ.ವಿ. ಪ್ರವೀಣ್ ಎಂಬ ವಕೀಲರು, ರಿಜಿಸ್ಟರ್ ಪೋಸ್ಟ್ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಮಂಡ್ಯ ಎಸ್.ಪಿ.ಗೆ ದೂರು ಸಲ್ಲಿಸಿ, ಪ್ರತಾಪ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪತ್ರ ರವಾನಿಸಿದ್ದಾರೆ. ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್ ಎಂಬ ಪತ್ರಿಕಾ ವರದಿಯನ್ನು ಆಧರಿಸಿ ದೂರು ದಾಖಲು ಮಾಡಿರುವ ವಕೀಲ ಕೆ.ವಿ. ಪ್ರವೀಣ್ ಅವರು, ಸಂಶೋಧನೆ ಹೆಸರಿನಲ್ಲಿ, ಸಾರ್ವಜನಿಕರಿಂದ ಅಪಾರ ದೇಣಿಗೆ ಪಡೆದು ಪ್ರತಾಪ್ ಐಶಾರಾಮಿ ಜೀವನ ನಡೆಸಿರುವ ಬಗ್ಗೆ ವರದಿ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ, 87 ರಾಷ್ಟ್ರಗಳಲ್ಲಿ ಆಫರ್ ದೊರೆತಿರುವುದಾಗಿ ಹೇಳಿಕೊಳ್ಳುವ ಮೂಲಕ ದೇಶವಾಸಿಗಳ ನಂಬಿಕೆಗೆ ದ್ರೋಣ್ ಪ್ರತಾಪ್ ಮೋಸ ಮಾಡಿದ್ದಾರೆ. ಜೊತೆಗೆ, ಸಾರ್ವಜನಿಕವಾಗಿ ದೇಣಿಗೆ, ಬಿರುದು, ಸನ್ಮಾನಗಳನ್ನು ಪಡೆದು ದ್ರೋಣ್ ಪ್ರತಾಪ್ ವಂಚಿಸಿದ್ದಾರೆ. ಹೀಗಾಗಿ, ಇವರ ವಿರುದ್ಧ, ಸೂಕ್ತ ಕಾನೂನು ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಕ್ರಮ ಜರುಗಿಸಲು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಈ ಸಾಗರದ ವಕೀಲರಾದ ಕೆ.ವಿ. ಪ್ರವೀಣ್ ಅವರು, ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾಗಾಂಧಿ ವಿರುದ್ಧವೂ ಸಾಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರು.