Thursday, January 16, 2025

ಎಲ್ಲೆಂದರಲ್ಲಿ ನೊಣಗಳು ಸಾರ್ ನೊಣಗಳು; ಕೇಳೋರಿಲ್ಲ ಹಳ್ಳಿಗಳ ಜನರ ಗೋಳು!

ಮಂಡ್ಯ: ಕುಳಿತರೆ ನೊಣ.. ಊಟ ಮಾಡಲು ಹೋದರೂ ನೊಣ.. ಊರಿನ ಎಲ್ಲಿ ನೋಡಿದರೂ ನೊಣಗಳದ್ದೇ ಹಾವಳಿ. ಅದು ಒಂದೆರಡು ಮನೆಗಳ ಸಮಸ್ಯೆ ಅಲ್ಲ. ನಾಲ್ಕೈದು ಗ್ರಾಮಗಳ ಜನರನ್ನ ನೊಣಗಳು ಹಿಂಡು ಇಪ್ಪೆ ಮಾಡ್ತಿವೆ.

ಹೌದು, ಕುಳಿತರೆ ನೊಣ..  ಊಟ ಮಾಡಲು ಹೋದರೂ ನೊಣ.. ಆಹಾರದ ಮೇಲೆ, ನೀರಿನ ಮೇಲೆ ಎಲ್ಲೆಂದರಲ್ಲಿ ನೊಣಗಳದ್ದೇ ಹಾವಳಿ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಸಕ್ಕರೆ ನಾಡು ಮಂಡ್ಯದಲ್ಲಿ. ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಮಂಜುಶ್ರೀ ಹೆಸರಿನ ಬಹು ದೊಡ್ಡ ಕೋಳಿ ಫಾರಂ ಇದೆ. ಈ ಫಾರಂ ಆರಂಭವಾದಾಗ್ಲಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿತ್ಯ ಯಾತನೆಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಕೋಳಿ ಫಾರಂ, ನಾಲ್ಕೈದು ಹಳ್ಳಿಗಳಿಗೆ ಪ್ರಾಬ್ಲಂ:

ಈ ಒಂದು ಕೋಳಿ ಫಾರಂನಿಂದಾಗಿ ತಿರುಮಲಾಪುರ, ಮಾಡವೀರನಹಳ್ಳಿ, ಬಿದರಕಟ್ಟೆ, ಮಾಯಣ್ಣನ ಕೊಪ್ಪಲು, ಬಸರಾಳು ಗ್ರಾಮಗಳು ಜನರು ನಿತ್ಯವೂ ನೊಣಗಳ ಜೊತೆಯಲ್ಲೇ ಜೀವನ ಸಾಗಿಸಬೇಕಿದೆ.

ಮಂಜುಶ್ರೀ ಕೋಳಿ ಫಾರಂನಲ್ಲಿ ನೊಣಗಳು ದೊಡ್ಡ ಮಟ್ಟದಲ್ಲಿ ಉತ್ಪತ್ತಿಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಮತ್ತು  ಪ್ರತಿಭಟನೆಗೆ ಕಾರಣವಾಗಿದೆ. ನೊಣಗಳ ಸಮಸ್ಯೆಯೆಂದರೆ ಒಬ್ಬಿಬ್ಬರ ಸಮಸ್ಯೆಯಲ್ಲ, ನಾಲ್ಕೈದು ಗ್ರಾಮಗಳಲೆಲ್ಲ ಇಂತಹ ಸಮಸ್ಯೆ ತಲೆದೋರಿದೆ. ಮನೆಯಲ್ಲಿನ ಪಾತ್ರೆಗಳ ಮೇಲೆ ನೊಣಗಳು ಕುಳಿತು ಅಂಟು ಅಂಟಾಗಿವೆ, ಕಿಟಕಿ ಗಾಜುಗಳು, ಗೋಡೆಗಳು ನೊಣಗಳ ಅಂಟಿನಿಂದ ಗಲೀಜಾಗಿ ಕೈಯಿಂದ ಮುಟ್ಟಲಾಗದಂತೆ ಆಗಿದೆ. ಗ್ರಾಮದಲ್ಲಿ ಹಬ್ಬ ಮಾಡಿದರೆ, ಯಾರದರು ಸತ್ತರೆ ಜನ ಊಟ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಎಲ್ಲರ ಮನೆಯಲ್ಲೂ ನೊಣಗಳ ಹಾವಳಿಯಿಂದ ಜನ ನೆಮ್ಮದಿಯನ್ನು ಕಳೆದುಕೊಂಡು ನಿದ್ದೆ ಮಾಡದಂತಾಗಿದೆ. ಹೈನುಗಾರಿಕೆ ಮತ್ತು ಮನುಷ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಅಂತಾರೆ ಸ್ಥಳೀಯರು.

ಕೋಳಿ ಫಾರಂ ಎದುರು ಪ್ರತಿಭಟನೆ, ಉದ್ಧಟತನ ಪ್ರದರ್ಶಿಸಿದ ಸಿಬ್ಬಂದಿ ವರ್ತನೆಗೆ ಖಂಡನೆ:

ನೊಣಗಳ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮದ ಜನತೆ ಮುತ್ತಿಗೆ ಹಾಕಿ ಕೋಳಿ ಫಾರಂನ್ನು ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಫಾರಂ ಎದುರು ಪ್ರತಿಭಟನೆ ಮಾಡ್ತಿದ್ದ ಗ್ರಾಮಸ್ಥರ ಮೇಲೆ ಫಾರಂ ಸಿಬ್ಬಂದಿ ಉದ್ಧಟತನ ಪ್ರದರ್ಶನ ಮಾಡಿದ್ರು. ಇದ್ರಿಂದ ರೊಚ್ಚಿಗೆದ್ದ ಪ್ರತಿಭಟನಾನಿರತರು ಫಾರಂ ಸಿಬ್ಬಂದಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡ್ರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನೊಣಗಳ ಹಾವಳಿ ಬಗ್ಗೆ ಫಾರಂ ಮಾಲೀಕರು ಹಾಗೂ ಬಸರಾಳು ಗ್ರಾಮ ಪಂಚಾಯಿತಿ ಗಮನಕ್ಕೆ ಸಾಕಷ್ಟು ಸಲ ಮನವಿ ಮಾಡಲಾಗಿದೆ. ಆದರೂ ಯಾರೊಬ್ಬರು ಈ ಬಗ್ಗೆ ಗಮನಹರಿಸಿಲ್ಲ.  ಕೂಡಲೇ ನೊಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಎಲ್ಲರೂ ಸೇರಿ ಉಗ್ರ ಹೋರಾಟ ಮಾಡೋ ಎಚ್ಚರಿಕೆ ನೀಡಿದ್ರು.

ಇನ್ನಾದರೂ ಕೋಳಿ ಫಾರಂ ಮಾಲೀಕರಾಗಲೀ ಅಥವಾ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂಧಿಸಬೇಕು. ಆ ಮೂಲಕ ನೊಣಗಳ ಹಾವಳಿಯನ್ನ ನಿಯಂತ್ರಿಸಬೇಕಿದೆ.

ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

RELATED ARTICLES

Related Articles

TRENDING ARTICLES