ತುಮಕೂರು : ರಾಜ್ಯದಲ್ಲಿ ಕೊವಿಡ್ ಮಹಾಮಾರಿ ರಣಕೇಕೆ ಹಾಕುತ್ತಿದೆ. ತುಮಕೂರಲ್ಲಿ ಈಗಾಗಲೇ 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ರಾಜ್ಯ ಸರ್ಕಾರ ಬೆಂಗಳೂರನ್ನು ಎರಡನೇ ಹಂತದ ಲಾಕ್ ಡೌನ್ ಮಾಡಿದ ನಂತರ ಈಗ ತುಮಕೂರು ಜಿಲ್ಲೆಯ ಮೂರು ತಾಲೂಕುಗಳು ಕೂಡ ಸ್ವಯಂ ಪ್ರೇರಿತವಾಗಿ ಎರಡನೇ ಹಂತದ ಲಾಕ್ ಡೌನ್ ಘೊಷಿಸಿಕೊಂಡು ತಮ್ಮ ತಾಲೂಕಲ್ಲಿ ಕೋವಿಡ್ ಮಟ್ಟ ಹಾಕುವ ಪ್ರಯತ್ನ ಆರಂಭಿಸಿವೆ. ಹೌದು ತುಮಕೂರು ಈಗ ಕೊರೊನಾ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದ್ದು ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಈಗ 612 ಪ್ರಕರಣಗಳು ದಾಖಲಾಗಿದ್ದು 18 ಸಾವುಗಳನ್ನ ಜಿಲ್ಲೆ ಕಂಡಿದೆ. ಕೇಂದ್ರ ಸರ್ಕಾರ ಹಾಕಿದ ಲಾಕ್ ಡೌನ್ ಮುಗಿದ ಬಳಿಕ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ವಿಧಿಸಿಕೊಂಡಿದ್ದ ಕೊರಟಗೆರೆ ತಿಪಟೂರು ಹಾಗೂ ಕುಣಿಗಲ್ ತಾಲೂಕುಗಳು ಈಗ ಎರಡನೇ ಹಂತದ ಸ್ವಯಂಪ್ರೇರಿತ ಲಾಕ್ ಡೌನ್ ಇಂದಿನಿಂದಲೇ ಜಾರಿಗೆ ಬರುವಂತೆ ವಿಧಿಸಿಕೊಂಡಿವೆ. ಕುಣಿಗಲ್ 29, ತಿಪಟೂರು 24, ಕೊರಟಗೆರೆಯಲ್ಲಿ 36 ಪ್ರಕರಗಳು ದಾಖಲಾಗಿದ್ದು, ಕುಣಿಗಲ್ ಹಾಗೂ ಕೊರಟಗೆರೆಯಲ್ಲಿ ತಲಾ ಒಂದೊಂದು ಸಾವಾಗಿದೆ. ಕಳೆದ ಎರಡು ವಾರದ ಹಿಂದೆ ಶೂನ್ಯದಲ್ಲಿದ್ದ ಪ್ರಕರಣಗಳ ಸಂಖ್ಯೆ ಕೇವಲ 14 ದಿನದಲ್ಲಿ ಹೆಚ್ಚಾಗಿದ್ದು ಸ್ವಯಂಪ್ರೇರಿತ ಲಾಕ್ ಡೌನ್ ನಿಂದ ಕೋವಿಡ್ ನಿಯಂತ್ರಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಮೂರು ತಾಲೂಕಿನ ಜನರಿದ್ದಾರೆ. ಜೂನ್ 25 ರಿಂದ ಜುಲೈ 10 ರವರೆಗೂ ಈ ಮೂರು ತಾಲೂಕುಗಳು ಸ್ವಯಂ ಪ್ರೇರಿತ ಹಾಫ್ ಲಾಕ್ ಡೌನ್ ಮಾಡಿಕೊಂಡಿತ್ತು. ಬೆಂಗಳೂರಲ್ಲಿ ಎರಡನೇ ಹಂತದ ಲಾಕ್ ಡೌನ್ ಆರಂಭವಾದಾಗ ಈ ಮೂರು ತಾಲೂಕಿನ ಜನರು ತಾವೂ ಎರಡನೇ ಹಂತದ ಸೆಲ್ಫ್ ಲಾಕ್ ಡೌನ್’ನ್ನ ಇಂದಿನಿಂದ ಆರಂಭಿಸಿದ್ದಾರೆ. ನಾಗರೀಕ ವೇದಿಕೆಗಳು, ಸಂಘ ಸಂಸ್ಥೆಗಳು, ವರ್ತಕರುಗಳು ಹಾಗೂ ಸಾರ್ವಜನಿಕರು ಬೆಂಬಲ ಸೂಚಿಸಿದ್ದು ಇಂದಿನಿಂದ ವಾರಗಳ ಕಾಲ ಸ್ವಯಂ ಲಾಕ್ ಡೌನ್ ಇರಲಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಜನರು ಹೊರಬರಲಿದ್ದು ಕೃಷಿ ಸೇರಿದಂತೆ ತೋಟಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಕೆಲಸಗಳು ನಡೆಯುತ್ತಿವೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. ಬಳಿಕ ಎಲ್ಲವೂ ಸ್ತಬ್ದವಾಗಲಿದೆ. ಒಟ್ಟಾರೆ ಜಿಲ್ಲೆಯ ಮೂರು ತಾಲೂಕಿನ 6 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತ ಲಾಕ್ ಡೌನ್ ಗೆ ಒಳಗಾಗುತ್ತಿದ್ದು ಪೊಲೀಸ್ ಹಾಗೂ ಸ್ಥಳೀಯ ಆಡಳಿತಗಳೂ ಕೂಡ ಅಗತ್ಯ ಸಹಕಾರ ನೀಡಲು ನಿರ್ಧರಿಸಿವೆ. ಒಟ್ಟಾರೆ. ಜನರ ಸಹಕಾರದಿಂದ ಆರಂಭವಾದ ಮೊದಲ ಹಂತದ ಸ್ವಯಂ ಲಾಕ್ ಡೌನ್ ಎರಡನೇ ಹಂತಕ್ಕೇರಿದ್ದು ಜಿಲ್ಲೆಯ ಉಳಿದ 7 ತಾಲೂಕುಗಳಲ್ಲೂ ಲಾಕ್ ಡೌನ್ ಬಗ್ಗೆ ಚರ್ಚೆಯಾಗ್ತಿದೆ.
ಹೇಮಂತ್ ಕುಮಾರ್. ಜೆ.ಎಸ್, ಪವರ್ ಟಿವಿ, ತುಮಕೂರು.