ಗದಗ : ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಜುಲೈ 17 ರ ರಾತ್ರಿ 8 ಗಂಟೆಯಿಂದ ಜುಲೈ 27 ರ ಬೆಳಿಗ್ಗೆ 5 ಗಂಟೆಯವರೆಗೆ ಕೆಲವೊಂದು ವಿನಾಯಿತಿ ನೀಡಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಬೆಳಿಗ್ಗೆ 5 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿಸಲಾಗಿದೆ. 65 ವರ್ಷದ ಮೇಲ್ಪಟ್ಟ ಹಿರಿಯ ನಾಗರೀಕರನ್ನು, 10 ವರ್ಷದೊಳಗಿನ ಮಕ್ಕಳನ್ನು, ಯಾವುದೇ ರೋಗವನ್ನು ಹೊಂದಿರುವ ರೋಗಗ್ರಸ್ಥ ವ್ಯಕ್ತಿಗಳನ್ನು ಹಾಗೂ ಗರ್ಭಿಣಿಯರನ್ನು ಆರೋಗ್ಯ, ಅವಶ್ಯಕ ಪೂರೈಕೆಗಳಂತಹ ಅನಿವಾರ್ಯ ಕಾರಣಗಳಲ್ಲದ ಹೊರತು ಕಡ್ಡಾಯವಾಗಿ ಅವರ ಮನೆಯಲ್ಲಿಯೇ ಇರುವಂತೆ ಸೂಚಿಸಿದೆ. ಯಾವುದೇ ಬೃಹತ್ ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಸಂತೆ, ಜಾತ್ರೆ, ಧಾರ್ಮಿಕ, ಸಾಮಾಜಿಕ ಗುಂಪು ಸೇರುವುದನ್ನು ನಿರ್ಭಂದಿಸಲಾಗಿರುತ್ತದೆ. ಈ ಆದೇಶದ ದಿನಾಂಕದ ಮೊದಲು ನಿಶ್ಚಯಿಸಿದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡ ವಿವಾಹ ಕಾರ್ಯಕ್ರಮಗಳಿಗೆ ಈ ಮೊದಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ. ಶವ ಸಂಸ್ಕಾರ ಕಾರ್ಯಕ್ಕೆ ಈ ಮೊದಲು ನಿಗದಿಪಡಿಸಿದಂತೆ ಅನುಮತಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಒಂದು ಮೀಟರ್ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳತಕ್ಕದ್ದು. ಹಾಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಹಾಫ್ ಲಾಕ್ಡೌನ್ ಜಾರಿ
TRENDING ARTICLES