ದಕ್ಷಿಣ ಕನ್ನಡ : ಕೊರೊನಾ ಸೋಂಕಿತರಿಂದ ಅಧಿಕ ಬಿಲ್ ವಸೂಲಿ ಮಾಡಿರುವ ಆರೋಪ ವ್ಯಕ್ತವಾದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಟೀಂ ದಿಢೀರ್ ಭೇಟಿ ನೀಡಿದ ಘಟನೆ ನಡೆದಿದೆ. ವಾರದ ಹಿಂದೆ ಮಂಗಳೂರು ನಗರದ ಪಂಪ್ವೆಲ್ ನಲ್ಲಿರುವ ಇಂಡಿಯಾನ ಹೆಸರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತನೊಬ್ಬನಿಂದ ಲಕ್ಷಕ್ಕೂ ಅಧಿಕ ಬಿಲ್ ವಸೂಲಿ ಮಾಡಿರುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ದಕ್ಷಿಣ ಕನ್ನಡ ಜಿಲ್ಲಾಡಳಿತವು ತಂಡವಾಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಅರ್ಧ ಗಂಟೆಗೂ ಅಧಿಕ ಸಮಯ ಸಭೆ ನಡೆಸಿದ ಜಿಲ್ಲಾಡಳಿತ ತಂಡವು ಅಧಿಕ ಬಿಲ್ ವಸೂಲಾತಿ ಬಗ್ಗೆ ಮಾಹಿತಿ ಪಡೆಯಿತು. ಈ ಸಂದರ್ಭ ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಅಲಿ ಕುಂಬ್ಳೆ, “ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಲಕ್ಷ ಬಿಲ್ ಪಡೆದಿಲ್ಲ, ಬದಲಿಗೆ ಅಂತಹ ರೋಗಿಗಳಲ್ಲಿ ಇನ್ನಿತರ ರೋಗಗಳೂ ಇದ್ದು, ಅದಕ್ಕೂ ಚಿಕಿತ್ಸೆ ನೀಡಿದ್ದರಿಂದ ಅಷ್ಟೊಂದು ಬಿಲ್ ಆಗಿದೆ” ಅಂತಾ ಜಿಲ್ಲಾಡಳಿತದ ಗಮನಕ್ಕೆ ತಂದರು. ಜಿಲ್ಲಾಡಳಿತ ತಂಡದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಶಾಸಕ ವೇದವ್ಯಾಸ ಕಾಮತ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್ ಮೊದಲಾದವರು ಉಪಸ್ಥಿತರಿದ್ದರು.