ಮಂಡ್ಯ : ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆಯೇ ಕಾರ್ಖಾನೆಗೆ ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಿಂದ ನೂರಾರು ಕಾರ್ಮಿಕರನ್ನ ಕರೆತಂದಿರೋದು ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನ ಆತಂಕಕ್ಕೆ ದೂಡಿದೆ.
ಸಹಕಾರಿ ಸ್ವಾಮ್ಯದ PSSK(ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ)ಯನ್ನ ಸರ್ಕಾರ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆಗೆ ನೀಡಿದೆ.
ಕಾರ್ಖಾನೆಯನ್ನ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್ ನವರು ಈಗಾಗಲೇ ಕಾರ್ಖಾನೆ ಆರಂಭಕ್ಕೆ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ.
ಶೀಘ್ರದಲ್ಲೇ ಕಾರ್ಖಾನೆ ಆರಂಭಕ್ಕೆ ಮುಂದಾಗಿರೋ ನಿರಾಣಿ ಶುಗರ್ಸ್ ಆಡಳಿತ ಮಂಡಳಿ ನಡೆಯಿಂದ ಕಾರ್ಖಾನೆ ವ್ಯಾಪ್ತಿಯ ಅದರಲ್ಲೂ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಭಾಗದ ರೈತರು ಖುಷಿಯಾಗಿದ್ದಾರೆ.
ಸ್ಥಳೀಯರನ್ನ ಕಡೆಗಣಿಸಿ, ಹೊರಗಿನವರಿಗೆ ಆದ್ಯತೆ:
ನಾಲ್ಕೈದು ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಖಾನೆ ಆರಂಭವಾಗ್ತಿರೋದು ಕೇವಲ ಕಬ್ಬು ಬೆಳೆದ ಆ ಭಾಗದ ರೈತರು ಅಷ್ಟೇ ಅಲ್ಲ. ಕಾರ್ಖಾನೆಯ ಕಾರ್ಮಿಕರು, ಹೊಸದಾಗಿ ಉದ್ಯೋಗ ಬಯಸಿದ್ದ ನೂರಾರು ನಿರುದ್ಯೋಗಿಗಳ ಉದ್ಯೋಗದ ಕನಸು ಕೂಡ ಚಿಗುರೊಡೆದಿತ್ತು.
ಈ ನಡುವೆಯೇ, ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್ ಗಳಿಂದ ಹಿಡಿದು, ಗಾರೆ ಕೆಲಸದವರು, ಪೇಂಟರ್, ವೆಲ್ಡರ್ ಹಾಗೂ ಕಾರ್ಖಾನೆಯ ನೌಕರಿಗೂ ಮಹಾರಾಷ್ಟ್ರ ಮತ್ತು ಬೆಳಗಾವಿಯಿಂದ ನೂರಾರು ಸಂಖ್ಯೆಯ ಜನರನ್ನ ಕರೆತಂದಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿಯ ಈ ನಿರ್ಧಾರ ಸ್ಥಳೀಯ ಜನಪ್ರತಿನಿಧಿಗಳು, ರೈತರು, ಹೋರಾಟಗಾರರು ಸೇರಿದಂತೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಖಾನೆಯನ್ನ ಗುತ್ತಿಗೆಗೆ ಪಡೆಯುತ್ತಿದ್ದಂತೆ ಆಸಕ್ತಿ ಇರುವ ಹಳೇ ನೌಕರರು, ಕಾರ್ಮಿಕರನ್ನೇ ಮುಂದುವರಿಸುವ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡುವ ಭರವಸೆ ನೀಡಿ ಅರ್ಜಿ ಕೂಡ ಆಹ್ವಾನಿಸಿದ್ದರು.
150-200 ಹುದ್ದೆಗಳಿಗೆ ಕಾರ್ಖಾನೆ ಅರ್ಜಿ ಆಹ್ವಾನಿಸಿತ್ತಾದರೂ, ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದು, ಬರೋಬ್ಬರಿ 7,500(ಏಳೂವರೆ ಸಾವಿರ) ಮಂದಿ.
ಉದ್ಯೋಗಕ್ಕಾಗಿ ಜನಪ್ರತಿನಿಧಿಗಳ ಶಿಫಾರಸ್ಸು:
ಅರ್ಜಿ ಸಲ್ಲಿಸಿರುವ ಏಳೂವರೆ ಸಾವಿರ ಮಂದಿಯಲ್ಲಿ ನೂರಾರು ಜನರು ತಮಗೆ ಗೊತ್ತಿರುವ ಸಚಿವರು, ಸಂಸದರು, ಶಾಸಕರು, ಮುಖಂಡರ ಮೂಲಕ ಶಿಫಾರಸ್ಸು ಮಾಡಿಸುತ್ತಿರುವ ಮಾತುಗಳು ಕೇಳಿ ಬರುತ್ತಿವೆ.
ಕೊರೋನಾ ಮತ್ತು ಲಾಕ್ ಡೌನ್ ನಿಂದ ಹಲವರು ಉದ್ಯೋಗ ಕಳೆದುಕೊಂಡು, ನಿರುದ್ಯೋಗಿಗಳಾಗಿ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೂ ಸ್ಥಳೀಯರನ್ನ ಕಡೆಗಣಿಸಿ, ಹೊರಗಿನವರಿಗೆ ಆದ್ಯತೆ ನೀಡುತ್ತಿರುವ ಕಾರ್ಖಾನೆ ಆಡಳಿತ ಮಂಡಳಿಯ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಕಾರ್ಮಿಕರ ಕೈಯಲ್ಲಿ ಕ್ವಾರಂಟೀನ್ ಸೀಲ್ ಇದ್ದರೂ ಸಂಚಾರ ಆರೋಪ.
ಇನ್ನು ಮಹಾರಾಷ್ಟ್ರದಿಂದ ಕಾರ್ಮಿಕರನ್ನ ಕರೆತಂದಿರುವ ಬಗ್ಗೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರ ಹಾಕಿದ್ರು.
ನನಗೆ ಬಂದ ಮಾಹಿತಿ ಪ್ರಕಾರ ಮಹಾರಾಷ್ಟ್ರದಿಂದ 200ಕ್ಕೂ ಹೆಚ್ಚು ಕಾರ್ಮಿಕರನ್ನ ಕರೆ ತರಲಾಗಿದೆ. ಆ ಕಾರ್ಖಾನೆಗೆ ಆಗಮಿಸಿರುವ ಬಹುತೇಕ ಕಾರ್ಮಿಕರ ಕೈಯಲ್ಲಿ ಕ್ವಾರಂಟೀನ್ ಸೀಲ್ ಇದ್ದರೂ ಪಾಂಡವಪುರ, ಶ್ರೀರಂಗಪಟ್ಟಣ ಭಾಗಗಳಲ್ಲಿ ಸಂಚಾರ ಮಾಡ್ತಿದ್ದಾರೆ. ಈ ಭಾಗದಲ್ಲಿ ಕೊರೋನಾ ಹೆಚ್ಚಾದರೆ ನಿರಾಣಿಯವರೇ ನೇರ ಹೊಣೆ ಆಗ್ತಾರೆ.
ನಿರಾಣಿ ವರ್ತನೆಯನ್ನ ಈ ಭಾಗದ ಜನ ಒಪ್ಪಲ್ಲ.
ಅವರಿಗೆ ಕಾರ್ಖಾನೆಯನ್ನ ಗುತ್ತಿಗೆಗೆ ಅಷ್ಟೇ ನೀಡಿರೋದು. ಫ್ಯಾಕ್ಟರಿಯನ್ನ ತನಗೇ ಮಾರಿಬಿಟ್ಟಿದ್ದಾರೆ ಎಂಬಂತಹ ರೀತಿಯಲ್ಲಿ ಅವರು ವರ್ತಿಸುತ್ತಿರೋದು ಸರಿಯಲ್ಲ, ಈ ಭಾಗದ ಜನ ಅದನ್ನ ಒಪ್ಪುವುದೂ ಇಲ್ಲ ಅಂತಾ ಆಕ್ರೋಶ ಹೊರ ಹಾಕಿದ್ರು.
ಇನ್ನು ಕಾರ್ಖಾನೆ ತುಂಬೆಲ್ಲಾ ಬೆಳಗಾವಿ, ಮಹಾರಾಷ್ಟ್ರದವರ ಅಬ್ಬರವೇ ಜೋರಾಗಿದೆ. ಈ ಬಗ್ಗೆ ಸ್ಥಳೀಯರು ವಲಸೆ ಕಾರ್ಮಿಕರ ವರ್ತನೆಗೆ ಬೇಸರಗೊಂಡಿದ್ದಾರೆ. ರೈತರು, ಸ್ಥಳೀಯರಿಗೆ ಗೌರವ ಕೊಡದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಏನೇ ಆಗ್ಲೀ, ಈ ಹಿಂದೆ ಭರವಸೆ ನೀಡಿದ್ದಂತೆ ಸ್ಥಳೀಯ ರೈತರ ಜೊತೆಗೆ ನೌಕರರು, ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಈಡೇರಿಸುತ್ತಾ? ಅಥವಾ ಹೊರಗಿನವರಿಗೆ ಮನ್ನಣೆ ನೀಡುವ ಮೂಲಕ ಸ್ಥಳೀಯ ನಿರುದ್ಯೋಗಿಗಳ ಕನಸಿಗೆ ಎಳ್ಳು ನೀರು ಬಿಡುತ್ತ ಅನ್ನೋದನ್ನ ಕಾದು ನೋಡಬೇಕಿದೆ.
….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.