ಚಿಕ್ಕಬಳ್ಳಾಪುರ : ಕೊರೋನಾ ಪರೀಕ್ಷಾ ವರದಿ ನೀಡುವಲ್ಲಿ ಆರೋಗ್ಯ ಇಲಾಖೆ ತೀವ್ರ ತಡ ಮಾಡುತ್ತಿದೆ ಎಂದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗರುಡಾಚಾರ್ಲಹಳ್ಳಿ ಗ್ರಾಮದಲ್ಲಿ ಜು.9 ರಂದು ವ್ಯಕ್ತಿಯೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅಂದು ಗ್ರಾಮದ ಬಹುತೇಕರು ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ ಪರೀಕ್ಷೆಯ ವರದಿ ವಾರವಾದರೂ ಬಾರದಿರುವುದರಿಂದ ಇಡೀ ಗ್ರಾಮವೇ ಕೊರೋನಾ ವರದಿಗಾಗಿ ಕಾದು ಕುಳಿತಿದ್ದು, ಭಯದ ವಾತಾವರಣದಲ್ಲಿ ಗ್ರಾಮಸ್ಥರು ದಿನ ಕಳೆಯುವಂತಾಗಿದೆ.
ಮೈಸೂರಿನಿಂದ ಇತ್ತೀಚೆಗೆ ಗರುಡಾಚಾರ್ಲಹಳ್ಳಿ ಗ್ರಾಮಕ್ಕೆ ಬಂದಿದ್ದ ವ್ಯಕ್ತಿವೋರ್ವನಿಗೆ ಜುಲೈ 9 ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಅಂದು ಅನುಮಾನಿತರೆಲ್ಲಾ ಪರೀಕ್ಷೆ ಮಾಡಿಸಿಕೊಂಡಿದ್ದರು.ಆದರೆ ಅವರ ವರದಿ ಇನ್ನೂ ನೀಡದಿರುವುದರಿಂದ ಗ್ರಾಮದಲ್ಲಿ ಮತ್ಯಾರಿಗೆ ಸೋಂಕು ತಾಕಿದೆ ಎಂಬ ಮಾಹಿತಿ ತಿಳಿಯದೆ ಆತಂಕದಲ್ಲಿದ್ದಾರೆ.
ಪ್ರಾಥಮಿಕ ಸಂಪರ್ಕಿತರ ನರಳಾಟ:
ಗ್ರಾಮದಲ್ಲಿ ವ್ಯಕ್ತಿಯೋರ್ವನಿಗೆ ಸೋಂಕು ದೃಢವಾಗುತ್ತಿದ್ದಂತೆ ಜುಲೈ 9 ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ವೈದ್ಯರು, ಅಧಿಕಾರಿಗಳು ಅಂದಿನಿಂದ ಇಂದಿನವರೆಗೆ ಗ್ರಾಮದತ್ತ ಮುಖಮಾಡಿಲ್ಲ. ಅಲ್ಲದೇ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಸಹಾ ಕ್ವಾರಂಟೈನ್ ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ಗ್ರಾಮದಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ವರದಿಯೂ ಇನ್ನೂ ಬಾರದಿರುವುದರಿಂದ ಮನೆ, ಗ್ರಾಮಗಳಿಂದ ದೂರ ಉಳಿಯಲಾಗದೆ, ಗ್ರಾಮದಲ್ಲಿ ಸ್ವಾತಂತ್ರ್ಯವಾಗಿ ಬದುಕಲಾಗಿದೆ, ಸಣ್ಣ ಪುಟ್ಟ ಜ್ವರ, ಶೀತಕ್ಕೂ ಹೆದರಿ ನರಳಾಡುತ್ತಿದ್ದಾರೆ.
ಆರೋಗ್ಯ ಇಲಾಖೆಗೆ ಹಿಡಿಶಾಪ:
ವಾರವಾದರೂ ಕೊರೋನಾ ಪರೀಕ್ಷೆಯ ವರದಿ ನೀಡದಿರುವುದರಿಂದ ಯಾರಿಗೆ ಸೋಂಕಿದೆ ಎಂಬುದು ತಿಳಿಯದಾಗಿದೆ. ಗ್ರಾಮದ ಜನರು ಮನೆ ಬಿಟ್ಟು ಹೊರಗೆ ಬರಲು ಭಯ ಪಡುತ್ತಿದ್ದಾರೆ. ಕನಿಷ್ಠ ಪ್ರಾಥಮಿಕ ಸಂಪರ್ಕಿತರನ್ನು ಸಹಾ ಕ್ವಾರಂಟೈನ್ ಮಾಡದಿರುವುದರಿಂದ ಸೋಂಕು ಇತರರಿಗೂ ಹಬ್ಬುವ ಆತಂಕ ಎದುರಾಗಿದೆ. ಆರೋಗ್ಯ ಇಲಾಖೆ ವರದಿ ನೀಡುವಲ್ಲಿ ಹಾಗೂ ಸೋಂಕಿತರ ಸಂಪರ್ಕಿತರನ್ನು ಹುಡುಕುವಲ್ಲಿ ಬೇಜವಾಬ್ದಾರಿ ವಹಿಸುತ್ತಿದೆ. ವಾರದಿಂದ ವೈದ್ಯರಾಗಲಿ ತಾಲ್ಲೂಕಿನ ಅಧಿಕಾರಿಗಳಾಗಲಿ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಂದು ಗ್ರಾಮದ ಸ್ಥಿತಿಯಲ್ಲ ಬದಲಾಗಿ ಜಿಲ್ಲೆಯಾದ್ಯಂತ ಇದೇ ರೀತಿಯ ಪರಿಸ್ಥಿತಿ ನಿರ್ಮಣವಾಗಿರುವುದರಿಂದಲೇ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆಯ ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇನ್ನಾದರೂ ಪರೀಕ್ಷಾ ವರದಿ ತ್ವರಿತ ಗತಿಯಲ್ಲಿ ಬರುವಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕಾಗಿದೆ..