ಆಕಸ್ಮಿಕವಾಗಿ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆಯ ಯೋಧ ಪಿ,ಕೆ ಶಾರನ್ನು ಪಾಕ್ ಸೇನೆ ಬಿಡುಗಡೆ ಮಾಡಿದ್ದು. ಅಟಾರಿ-ವಾಘಾ ಗಡಿ ಮೂಲಕ ಅವರನ್ನು ಭಾರತಕ್ಕೆ ವಾಪಸ್ ಕರೆತರುವಲ್ಲಿ ಭಾರತ ಸಫಲವಾಗಿದೆ. ಈ ಮೂಲಕ ಭಾರತ ಸೇನೆಗೆ ಮತ್ತೊಂದು ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ.
ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಬಿಎಸ್‌ಎಫ್ ಜವಾನ್ ಪಿಕೆ.ಶಾ ಅವರು ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿ (ಐಬಿ) ದಾಟಿದ್ದರು. ಹೀಗಾಗಿ ಬಿಎಸ್‌ಎಫ್ ಸೈನಿಕನನ್ನು ಪಾಕಿಸ್ತಾನ ರೇಂಜರ್‌ಗಳು ವಶಕ್ಕೆ ಪಡೆದಿದ್ದರು.
ಭಾರತ-ಪಾಕ್ ಗಡಿಯ ಸಮೀಪವಿರುವ ಕೃಷಿ ಭೂಮಿಯ ಬಳಿ ಕಳೆದ ಏ.23 ಮಧ್ಯಾಹ್ನ ಕರ್ತವ್ಯದಲ್ಲಿದ್ದಾಗ ಈ ಘಟನೆ ಸಂಭವಿಸಿತ್ತು. ನಿಯಮಿತ ಸಮಯದಲ್ಲಿ, ಯೋಧ ಅಜಾಗರೂಕತೆಯಿಂದ ಭಾರತೀಯ ಗಡಿ ಬೇಲಿಯನ್ನು ದಾಟಿ ಪಾಕಿಸ್ತಾನ ಭೂ ಪ್ರದೇಶವನ್ನು ಪ್ರವೇಶಿಸಿದರು. ಆಗ ಅಲ್ಲಿ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದರು. ಬಂಧನದ ನಂತರ ಭಾರತೀಯ ಸೇನೆ ಮತ್ತು ಪಾಕಿಸ್ತಾನ ರೇಂಜರ್ಸ್‌ನ ಉನ್ನತ ಅಧಿಕಾರಿಗಳು ಈ ವಿಷಯವನ್ನು ಪರಿಹರಿಸಲು ಮತ್ತು ಸೈನಿಕನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಧ್ವಜ ಸಭೆಯನ್ನು ಪ್ರಾರಂಭಿಸಿದರು.
ಪ್ರತಿವಾರವೂ ಎರಡು ಸೇನೆಗಳ ನಡುವೆ ಯೋಧನ ಬಿಡುಗಡೆಗಾಗಿ ಧ್ವಜ ಸಭೆಗಳನ್ನು ನಡೆಸಲಾಗುತ್ತಿತ್ತು. ಇದೀಗ ಭಾರತದ ಮಾತುಕತೆ ಸಫಲವಾಗಿದ್ದು. 20 ದಿನಗಳ ಬಳಿಕ ಭಾರತದ ಯೋಧ ಭಾರತಕ್ಕೆ ವಾಪಾಸ್ ಬಂದಿದ್ದಾರೆ. ಈ ಕುರಿತಾದ ಹೆಚ್ಚಿನ ಮಾಹಿತಿ ದೊರಕಬೇಕಿದೆ.