ಚಿಕ್ಕಮಗಳೂರು : ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಏಳು ದಿನಗಳ ಕಾಲ ಸ್ಕೂಲ್ ಕಟ್ಟಡದಲ್ಲಿ ಇದ್ದು ಆಮೇಲೆ ಮನೆ ಬರಬೇಕೆಂದು ಗ್ರಾಮದ ತುಂಬೆಲ್ಲಾ ಡಂಗೂರು ಸಾರಿಸಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗೂರ ಸಾರಿಸಿ ಸ್ಥಳಿಯರಿಗೆ ಎಚ್ಚರಿಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಬರುವವರನ್ನ ಯಾರೂ ಮನೆಗೆ ಸೇರಿಸಬಾರದು ಎಂದು ಗ್ರಾಮಸ್ಥರಿಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಹೊರಗಿನಿಂದ ಬಂದವರನ್ನ ಮನೆಗೆ ಸೇರಿಸಿಕೊಂಡರೆ ಅಂತವರಿಗೆ ಯಾವುದೇ ಮುಲಾಜಿಲ್ಲದೆ ದಂಡ ಹಾಕುವುದಾಗಿ ತಿಳಿಸಿದ್ದಾರೆ. ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ. ಬಂದವರು ಕಡ್ಡಾಯವಾಗಿ ಏಳು ದಿನಗಳ ಕಾಲ ಸ್ಕೂಲ್ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದು ಆಮೇಲೆ ಮನೆಗೆ ಬರಬೇಕೆಂದು ಡಂಗೂರು ಸಾರಿಸಿ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ 155 ಕೊರೋನ ಕೇಸ್ ಪತ್ತೆಯಾಗಿದ್ದು, 97 ಜನ ಬಿಡುಗಡೆಯಾಗಿದ್ದರೆ, 54 ಸಕ್ರಿಯ ಕೇಸ್ ಗಳಿವೆ. ಇತ್ತೀಚಿನ ಪ್ರಕರಣಗಳಲ್ಲಿ ಬೆಂಗಳೂರಿಗೆ ಹೋಗಿ ಬಂದ ಬಹುತೇಕರಲ್ಲಿ ಕೊರೋನ ಪತ್ತೆಯಾಗಿರೋದ್ರಿಂದ ಹಳ್ಳಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ. ಕೊರೋನ ಆರಂಭದ ದಿನಗಳಲ್ಲಿ ಹೊರಜಿಲ್ಲೆಗಳಿಂದ ಬಂದರೆ ಅಂಥವರನ್ನು ಗ್ರಾಮದ ಹೆಬ್ಬಾಗಿಲಿನಿಂದ ವಾಪಸ್ಸು ಕಳಿಸಿದರು. ಗ್ರಾಮದ ಮುಂಭಾಗ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದವರು ಯಾರೂ ಗ್ರಾಮದೊಳಕ್ಕೆ ಕಾಲಿಡದಂತೆ ಹಳ್ಳಿಗರು ಕಾದುಕುಳಿತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕರೋನಾ ವಿಶ್ವವ್ಯಾಪ್ತಿ ಹರಡಿರುವುದರಿಂದ ಹಳ್ಳಿಗರು ಲಾಕ್ಡೌನ್ ನಂತಹ ನಿರ್ಧಾರಗಳನ್ನು ಕೈಬಿಟ್ಟು, ಈ ರೀತಿಯ ಕಾನೂನುಗಳನ್ನು ಹಳ್ಳಿಗಳಲ್ಲಿ ಸ್ವಯಂಪ್ರೇರಿತವಾಗಿ ಜಾರಿಗೆ ತಂದುಕೊಂಡಿದ್ದಾರೆ…