ಕಲಬುರಗಿ : ಭಾರತ ಮತ್ತು ಪಾಕಿಸ್ತಾನದ ವಿರುದ್ದ ಏರ್ಪಟ್ಟಿರುವ ಕದನ ವಿರಾಮದ ಕುರಿತು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದು, 56 ಇಂಚಿನ ಎದೆ ಇರುವ ಮೋದಿ ಕೆಂಪು ಕೋಟೆ ಮೇಲೆ ನಿಂತು ಮಾತನಾಡಲು ಮಾತ್ರ ಸೀಮಿತವಾಗಿದೆ, ಮೋದಿ ದೇಶದ ಜನರಿಗೆ ಸತ್ಯ ಹೇಳಬೇಕು ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ ಖರ್ಗೆ ” ಭಾರತ ಪಾಕಿಸ್ತಾನದ ನಡುವೆ ಏರ್ಪಟ್ಟಿರುವ ಕದನ ವಿರಾಮದ ಬಗ್ಗೆ ಮೋದಿ ಸತ್ಯ ಹೇಳಬೇಕು, ಕದನ ವಿರಾಮ ಘೋಷಣೆ ಅಮೆರಿಕ ಮಾಡಿಸಿದ್ದಾ?, ಮೋದಿ ಮಾಡಿದ್ದಾ? ಅಥವಾ ಪಾಕಿಸ್ತಾನ ಮಾಡಿಸಿದ್ದಾ ? ಈ ಕುರಿತು ಮೋದಿ ಸ್ಪಷ್ಟನೆ ಕೊಡಬೇಕು. ಮೋದಿ ಕಡೆಯವರು ಕೇವಲ ಸೋಶಿಯಲ್ ಮೀಡಿಯಾ ಬಳಸಿಕೊಂಡು ಯುದ್ಧ ಮಾಡುತ್ತಿದ್ದಾರೆ.
ಇದನ್ನೂ ಓದಿ :ಕಟ್ಟಡ ಕಾರ್ಮಿಕನ ಮೂನ್ ವಾಕ್ ನೃತ್ಯಕ್ಕೆ ನೆಟ್ಟಿಗರು ಫಿದಾ..!
ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಯಚರಣೆಯಲ್ಲಿ ಮೋದಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ. ಆದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ, ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ. ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ ಬೆದರಿಕೆಗೆ ಬಗ್ಗಿ ಮೋದಿ ನಿರ್ಣಯ ಕೈಗೊಂಡಿದ್ದಾರೆ. ಅತ್ತ ಪಾಕಿಸ್ತಾನ ಪ್ರಧಾನಿ ಅಲ್ಲಿನ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿದ್ದಾರೆ ? ನಿನ್ನೆ ದೇಶ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮೋದಿ ಈ ಬಗ್ಗೆ ಹೇಳಬೇಕಿತ್ತು ಎಂದು ಹೇಳಿದರು.
ಇದನ್ನೂ ಓದಿ :ಆಪರೇಷನ್ ಸಿಂಧೂರ್ ಕಾರ್ಯಚರಣೆ: 17 ನವಜಾತ ಶಿಶುಗಳಿಗೆ ‘ಸಿಂಧೂರ’ ಎಂದು ನಾಮಕರಣ
ಮುಂದುವರಿದು ಮಾತನಾಡಿದ ಪ್ರಿಯಾಂಕ ಖರ್ಗೆ “56 ಇಂಚಿನ ಎದೆಯುಳ್ಳ ಪ್ರಧಾನಿ ಕೇವಲ ಕೆಂಪು ಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದೆ. ಭಾರತ ಪಾಕಿಸ್ತಾನವನ್ನ ಮೂರು ಬಾರಿ ಸೋಲಿಸಿದೆ. ಆದರೆ ಈ ಭಾರಿ ಭಾರತ ವಿದೇಶಾಂಗ ನೀತಿಯಲ್ಲಿ ಸೋತಿದೆ. ಪಹಲ್ಗಾಂ ದಾಳಿ ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ ?ಅವರು ದೇಶದ ಒಳಗಡೆ ಬಂದಿದ್ದಾರಾ ? ಹೊರಗಡೆ ಹೋಗಿದ್ದಾರಾ ? ಎಲ್ಲಿದ್ದಾರೆ ? ಏಕೆ ಹೇಳುತ್ತಿಲ್ಲ ? ಕೂಡಲೇ ಸಂಸತ್ ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಬೇಕು ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.