ಬೆಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು,ಈ ಹತ್ಯೆಯ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಕೈವಾಡವಿದೆ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್ ‘ ಸುಹಾಸ್ ಹತ್ಯೆ ಪ್ರಕರಣದಲ್ಲಿ ವಿದೇಶಿ ಹಣ ಹರಿದು ಬಂದಿರುವ ಆರೋಪವಿದೆ, ಸುಹಾತ್ ಹತ್ಯೆಯಲ್ಲಿ ಕೇವಲ ಸ್ಥಳೀಯ ದ್ವೇಷವಷ್ಟೇ ಅಲ್ಲದೇ, ಅಂತರ್ ರಾಷ್ಟ್ರೀಯ ಮಟ್ಟದ ಕೈವಾಡ ಕೂಡ ಇದೆ ಎಂಬ ಅನುಮಾನವಿದೆ. ನಾವು ಕೂಡ ಈ ಪ್ರಕರಣವನ್ನು ಎನ್ಐಎಗೆ ಕೊಡಬೇಕು ಎಂದು ಕೇಳಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ :ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಕ್ಯಾಂಪ್ ಫೈರ್ ಹಾಕಿ ಪಾರ್ಟಿ ಮಾಡಿದ್ದ ಆರೋಪಿಗಳು
ಮುಂದುವರಿದು ಮಾತನಾಡಿದ ಶಾಸಕ ವಿಶ್ವನಾಥ್ ‘ ಕರಾವಳಿ ಅನೇಕ ಉಗ್ರಗಾಮಿಗಳಿಗೆ ಆಶ್ರಯ ಕೊಟ್ಟಿದೆ, ಸುಹಾಸ್ ಶೆಟ್ಟಿ ಹತ್ಯೆ ಕೇವಲ 5 ಲಕ್ಷ ಸುಪಾರಿಗೆ ನಡೆದಿರುವ ಕೊಲೆಯಲ್ಲ. ಇದರ ಹಿಂದೆ ಅಂತರಾಷ್ಟ್ರೀಯ ಮಟ್ಟದ ಕುತಂತ್ರ ಇದೆ, ಮುಂದೆಯೂ ಇದೇ ರೀತಿ ಕೊಲೆಗಳಾಗುವ ಸಂಭವ ಇದೆ. ಹೀಗಾಗಿ ಈ ಪ್ರಕರಣವನ್ನ ಎನ್ಐಎಗೆ ವಹಿಸಲಿ ಎಂದು ನಾವು ಆಗ್ರಹಿಸುತ್ತೇವೆ.
ಇದನ್ನೂ ಒದಿ :ಉಗ್ರರ ಅಡಗುತಾಣ ಪತ್ತೆ: 5 IED ಬಾಂಬ್ ಸೇರಿದಂತೆ ಅನೇಕ ವಸ್ತುಗಳು ವಶ
ಈಗಾಗಲೇ ಮುಂದಿನ ಟಾರ್ಗೆಟ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಲವರು ಪೋಸ್ಟ್ ಹಾಕ್ತಿದ್ದಾರೆ, ಹಿಂದೂ ನಾಯಕರನ್ನು ಹತ್ಯೆ ಮಾಡುತ್ತಾರೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಇದು ಇಷ್ಟಕ್ಕೆ ನಿಲ್ಲಲ್ಲ. ಇವರಿಗೆ ಅಷ್ಟೋಂದು ಧೈರ್ಯ ಬಂದಿದೆ ಅಂದ್ರೆ ಹೊರ ರಾಷ್ಟ್ರ ಹಾಗೂ ಹೊರ ರಾಜ್ಯಗಳ ಕುಮ್ಮಕಿರಬಹುದು. ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಕರಣದ ಸಂಪೂರ್ಣ ತನಿಖೆ ಮಾಡಿ, ಇನ್ನು ಮುಂದೆ ಇಂತಹ ಘಟನೆಗಳಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.