ದಕ್ಷಿಣ ಕನ್ನಡ : ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ವಾರ ಕಾಲ ಲಾಕ್ ಡೌನ್ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಘೋಷಿಸಿದ್ದಾರೆ. ಇಂದು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಿಎಂ ಯಡಿಯೂರಪ್ಪ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಒಂದು ವಾರ ಕಾಲ ಲಾಕ್ಡೌನ್ ವಿಧಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಅದಕ್ಕೆ, ಆಯಾಯ ಜಿಲ್ಲೆಯ ಅಧಿಕಾರಿಗಳೇ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಸಿಎಂ ಪ್ರತಿಕ್ರಿಯಿಸಿದ್ದರು. ಆದ್ದರಿಂದ ಸಿಎಂ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಮುಗಿದ ತಕ್ಷಣವೇ ಸಭೆ ಸೇರಿದ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ವಾರ ಕಾಲ ಲಾಕ್ ಡೌನ್ ಮಾಡುವುದಾಗಿ ಘೋಷಿಸಿದ್ದಾರೆ. ಬುಧವಾರ ಸಂಜೆ ತನಕ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಿರುವ ಜಿಲ್ಲಾಡಳಿತವು, ಬುಧವಾರ (ಜುಲೈ 15) ರಾತ್ರಿಯಿಂದಲೇ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಗೆ ತರಲಿದ್ದು, ಸಾರ್ವಜನಿಕರೆಲ್ಲರೂ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕೇಳಿಕೊಂಡಿದ್ದಾರೆ. ಅಲ್ಲದೇ ಇಂದು ಸಂಜೆ ವೇಳೆಗೆ ಈ ಕುರಿತ ಅಗತ್ಯ ಮಾರ್ಗಸೂಚಿಗಳನ್ನ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೊರಡಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.