Wednesday, January 15, 2025

ಕೊಚ್ಚಿ ಹೋದ ಸೇತುವೆ, ಮೈದುಂಬಿ ಹರಿಯೋ ನದಿಯ ಒಡಲೇ ದಾರಿ..!

ಚಿಕ್ಕಮಗಳೂರು : ಓಡಾಡೋದಕ್ಕೆ ರಸ್ತೆ ಇಲ್ಲದೆ ಮೈದುಂಬಿ ಹರಿಯೋ ಹೇಮಾವತಿ ನದಿಯೊಳಗೆ ಸ್ಥಳಿಯರು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ನದಿ ದಾಟುವಂತಹಾ ದುಸ್ಸಾಹಸಕ್ಕೆ ಕೈಹಾಕುತ್ತಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದ್ದ ಸೇತುವೆ ಕಳೆದ ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಶಾಸಕರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ನಿರ್ಮಿಸಿಕೊಡೋ ಭರವಸೆ ನೀಡಿದ್ದರು. ಆದರೆ, ಜನನಾಯಕರು ಭರವಸೆ ಭರವಸೆಯಾಗೇ ಉಳಿದಿದೆ. ಸೇತುವೆಗೆ ತೀವ್ರ ಹಾನಿಯಾಗಿದ್ದರಿಂದ ಸ್ಥಳಿಯರೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಸುಂಕಸಾಲೆ, ಚಾರ್ಮುಡಿ ಘಾಟ್ ನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಬಂಕೇನಹಳ್ಳಿಯಲ್ಲಿ ಸ್ಥಳಿಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದೆ. ಇದ್ದೊಂದು ಸೇತುವೆ ಕೂಡ ಕೊಚ್ಚಿ ಹೋಗಿದ್ದರಿಂದ ಈ ಭಾಗದಲ್ಲಿ ಸುಮಾರು ನಾಲ್ಕೈದು ಹಳ್ಳಿಯ ಜನ ಬೇರೆ ದಾರಿ ಇಲ್ಲದೆ ಕಂಗಾಲಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಪಟ್ಟಣಕ್ಕೆ ಬರಬೇಕಾದರೆ ಗ್ರಾಮಸ್ಥರು ನೀರಿಗೆ ಇಳಿದು ನಡೆದೇ ದಡ ಸೇರಬೇಕಾಗಿದೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ನೀರಿನ ಪ್ರಮಾಣ ಕೂಡ ಏರುತ್ತಲೇ ಇದೆ. ಆದರೆ, ಸ್ಥಳಿಯರು ಅಗತ್ಯ ಹಾಗೂ ಅನಿವಾರ್ಯದ ಕೆಲಸಕ್ಕಾಗಿ ಜೀವದ ಹಂಗು ತೊರೆದು ಮಂಡಿ-ತೊಡೆ ಮಟ್ಟದ ನೀರಿಗಿಳಿದು ಅದರಲ್ಲಿ ಒಬ್ಬೊರ ಕೈ ಮತ್ತೊಬ್ಬರು ಹಿಡಿದು ನದಿ ದಾಟುತ್ತಿದ್ದಾರೆ. ಸರ್ಕಾರ ಅಥವ ಜನಪ್ರತಿನಿಧಿಗಳು ಕೂಡಲೇ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ನಿರ್ಮಾಣ ಅಸಾಧ್ಯ ಹಾಗಾಗಿ, ಇಲ್ಲಿ ಅನಾಹುತವೊಂದು ಸಂಭವಿಸೋ ಮುನ್ನ ಜನಪ್ರತಿನಿಗಳು ಎಚ್ಚೆತ್ತುಕೊಂಡು ಸ್ಥಳಿಯರಿಗೆ ಓಡಾಡಲು ಬೇರೆ ಸೌಲಭ್ಯವನ್ನಾದರೂ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ..

RELATED ARTICLES

Related Articles

TRENDING ARTICLES