ಕೋಲಾರ : ಆಸ್ತೀನಪ್ಪ, ಆಸ್ತಿ. ಆಸ್ತಿಗೋಸ್ಕರ ಇದನ್ನ ಮಾಡ್ಬಿಟ್ಟೆ ಅಂತ ಆ ರಿಟೈರ್ ಮೇಷ್ಟ್ರು ಹೇಳ್ತಿದ್ದಾರೆ. ಕೋಳಿ ಕೊಯ್ಯೋದಿಕ್ಕೆ ಇರಲಿ ಅಂತ ಶಬರಿಮಲೆಯಿಂದ ತಂದಿದ್ದ ಚಾಕು ಅದು. ಕೆಟ್ಟ ಘಳಿಗೆಯಲ್ಲಿ ನಡೀಬಾರದ್ದು ನಡೆದುಹೋಯ್ತು ಅಂತಾನೂ ಆ ನಿವೃತ್ತ ಶಿಕ್ಷಕ ಹೇಳ್ತಿದ್ದಾರೆ. ಇದು ಕೋಲಾರದ ಬಂಗಾರಪೇಟೆಯ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ಕೊಲೆ ಆರೋಪಿ ಅರವತ್ತೈದರ ಹರೆಯದ ವೃದ್ದನ ಪಶ್ಚಾತ್ತಾಪದ ಹೇಳಿಕೆಯಿದು.
ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ಕೊಲೆ ನಡೆದು ಇಪ್ಪತ್ತನಾಲ್ಕು ಗಂಟೆಗಳು ಕಳೆದಿದೆ. ಕರ್ತವ್ಯದ ಮೇಲೆ ಹಳ್ಳಿಯೊಂದಕ್ಕೆ ತೆರಳಿದ್ದ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರನ್ನು ಸ್ವಯಂ ಪ್ರಚೋದನೆಗೊಂಡ ನಿವೃತ್ತ ಶಿಕ್ಷಕ ವೆಂಕಟಪತಿ ಅನ್ನೋರು ಡ್ರ್ಯಾಗನ್ನಿಂದ ಚುಚ್ಚಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಮೌಳೇಶ್ವರ ಅವ್ರನ್ನು ಅಲ್ಲಿದವ್ರು ಜೀಪಿಗೆ ಹಾಕ್ಕೊಂಡು ಕಾಮಸಮುದ್ರ ಆಸ್ಪತ್ರೆ, ಬಂಗಾರಪೇಟೆ ಆಸ್ಪತ್ರೆ ಮತ್ತು ಕೋಲಾರ ಆಸ್ಪತ್ರೆಗಳಿಗೆ ಅಲೆದ್ರೂ ಪ್ರಯೋಜನವಾಗಿಲ್ಲ. ಐವತ್ತೈದು ವರ್ಷ ವಯಸ್ಸಿನ ಚಂದ್ರಮೌಳೇಶ್ವರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಅನ್ನೋ ಹೆಸರಿನಿಂದ ಕರೆಯಲಾಗುವ ಕಳವಂಚಿ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ಜಮೀನು ವಿವಾದವಿತ್ತು. ಐದಾರು ವರ್ಷಗಳಿಂದಲೂ ನಿವೃತ್ತ ಶಿಕ್ಷಕ ವೆಂಕಟಪತಿ ಮತ್ತು ರಾಮಮುರ್ತಿ ಅನ್ನೋರ ಮಧ್ಯೆ ಜಮೀನು ಅಳತೆಯ ವ್ಯಾಜ್ಯವಿತ್ತು. ಈ ಬಗ್ಗೆ ಕೋರ್ಟ್ ಕಚೇರಿ ಅಂತ ಇಬ್ಬರೂ ಅಲೆದಾಡಿದ್ರೂ ಅಂತಿಮವಾಗಿರಲಿಲ್ಲ. ಜಮೀನು ಸರ್ವೆ ಮಾಡೋದಿಕ್ಕಾಗಿ ವೆಂಕಟಪತಿ ಮನವಿ ಮಾಡಿದ್ದರಿಂದಾಗಿ ಗುರುವಾರ ಅದನ್ನೂ ನಿಗದಿ ಮಾಡಲಾಗಿತ್ತು. ಅದೇ ವಿಷಯವೇ ಕೆಟ್ಟ ಘಟನೆಗೆ ಮೂಲವಾಗಿತ್ತು.
ಜೂನ್ 9 ರ ಮಧ್ಯಾಹ್ನ 3 ಗಂಟೆಯ ವೇಳೆಗೆ ತೊಪ್ಪನಹಳ್ಳಿಯಲ್ಲಿ ಬಂಗಾರಪೇಟೆಯ ತಾಲೂಕು ಸರ್ವೇಯರ್ ಸಂತೋಷ್ ನಿವೃತ್ತ ಶಿಕ್ಷಕ ವೆಂಕಟಪತಿ ಅವರ ಜಮೀನು ಅಳತೆಗಾಗಿ ತೆರಳಿದ್ದರು. ಎದುರುದಾರ ರಾಮಮೂರ್ತಿ ಸಮ್ಮುಖದಲ್ಲೇ ಸರ್ವೇ ಕಾರ್ಯವೂ ನಡೆದಿತ್ತು. ಆದ್ರೆ, ಪ್ರತೀ ಹಂತದಲ್ಲಿಯೂ ವೆಂಕಟಪತಿ ತಕರಾರು ತೆಗೆಯುತ್ತಿದ್ದರು. ಇದ್ರಿಂದ ಬೇಸತ್ತ ಸರ್ವೇಯರ್ ಸಂತೋಷ್ ಅವ್ರು ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರಿಗೆ ಫೋನ್ ಮಾಡಿ ಸನ್ನಿವೇಶವನ್ನು ವಿವರಿಸಿದ್ರು. ಆ ವೇಳೆಗೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರು ಕೋಲಾರದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವ್ರ ಅಧ್ಯಕ್ಷತೆಯ ಮೀಟಿಂಗ್ನಲ್ಲಿ ಹಾಜರಿದ್ದರು. ಡಿಸಿ ಅವ್ರ ಅನುಮತಿಯನ್ನು ಪಡೆದುಕೊಂಡ ಚಂದ್ರಮೌಳೇಶ್ವರ ಅವ್ರು ಜೀಪಿನಲ್ಲಿ ತೊಪ್ಪನಹಳ್ಳಿ ಗ್ರಾಮದಲ್ಲಿ ಸರ್ವೇ ನಡೆಯುತ್ತಿದ್ದ ಜಾಗಕ್ಕೆ ಬಂದ್ರು.
ತೊಪ್ಪನಹಳ್ಳಿಗೆ ಬರುವ ಮಾರ್ಗದಲ್ಲೇ ಕಾಮಸಮುದ್ರ ಪೊಲೀಸ್ ಠಾಣೆಗೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರು ಕರೆ ಮಾಡಿ ಬಂದೋಬಸ್ತಾಗಿ ಬರುವಂತೆ ಸೂಚಿಸಿದ್ರು. ಸ್ಥಳಕ್ಕೆ ಬಂದ ಚಂದ್ರಮೌಳೇಶ್ವರ ಅವ್ರಿಗೆ ಸರ್ವೇಯರ್ ಪ್ರಕರಣವನ್ನು ವಿವರಿಸಿದ್ದಾರೆ. ನಿವೃತ್ತ ಶಿಕ್ಷಕ ವೆಂಕಟಪತಿ ಹಾಗೂ ರಾಮಮೂರ್ತಿ ಅವ್ರ ಜಮೀನು ದಾಖಲೆ ಪತ್ರಗಳನ್ನು ಪರಿಶೀಲಿಸಿದ ಚಂದ್ರಮೌಳೇಶ್ವರ ಅವ್ರು ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಆದ್ರೆ, ಈ ಮಾತು ವೆಂಕಟಪತಿ ಅವ್ರಿಗೆ ರುಚಿಸಿಲ್ಲ. ಜಮೀನು ಸರ್ವೇಯ ಜಾಗದಲ್ಲೇ ಅಧಿಕಾರಿಗಳ ಮೇಲೆ ಕೂಗಾಡಿದ್ದಾರೆ. ಐದು ಗುಂಟೆ ಜಮೀನು ಕಳೆದುಕೊಳ್ಳುತ್ತಿರುವ ಕೋಪಕ್ಕೆ ಎಲ್ಲರನ್ನೂ ಬೈದಾಡಿದ್ದಾರೆ. ಅಲ್ಲಿಯೇ ಇದ್ದ ಪೊಲೀಸ್ರು ಇವೆಲ್ಲವನ್ನೂ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ. ಜಮೀನು ವಿವಾದಗಳಲ್ಲಿ ಇವೆಲ್ಲ ಮಾಮೂಲು ಅಂತ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರು, ಮುಂದಿನ ಕ್ರಮಕ್ಕೆ ಸೂಚಿಸಿ ಜೀಪ್ ಇದ್ದ ಜಾಗಕ್ಕೆ ನಡೆದು ಬರುತ್ತಿದ್ದರು. ಆ ಸಂದರ್ಭದಲ್ಲಿ ದಾಖಲೆ ಪತ್ರಗಳಿದ್ದ ಬ್ಯಾಗ್ ಸಮೇತ ವೆಂಕಟಪತಿ ಜೀಪ್ ಬಳಿಯಿದ್ದ ಚಂದ್ರಮೌಳೇಶ್ವರ ಅವ್ರ ಬಳಿ ಓಡಿ ಬಂದಿದ್ದಾರೆ. ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿ ಹಾಳೆಗಳನ್ನು ಚಂದ್ರಮೌಳೇಶ್ವರ ಅವ್ರಿಗೆ ಕೊಡಲಾಗಿದೆ. ಪತ್ರಗಳನ್ನು ನೋಡ್ತಿದ್ದ ಚಂದ್ರಮೌಳೇಶ್ವರ ಅವ್ರ ಎದೆಗೆ ಡ್ಯಾಗರ್ನಿಂದ ಇರಿದೇ ಬಿಟ್ಟಿದ್ದಾನೆ ಪಾಪಿ ಶಿಕ್ಷಕ.
ದುಷ್ಕರ್ಮಿ ವೆಂಕಟಪತಿ ಇರಿತಕ್ಕೆ ತೀವ್ರವಾಗಿ ಗಾಯಗೊಂಡ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರು ರಕ್ತ ಸುರಿಸಿಕೊಂಡು ನೆಲಕ್ಕೆ ವಾಲಿದ್ದಾರೆ. ತಕ್ಷಣವೇ ಅವ್ರ ಸಹಾಯಕ್ಕೆ ಬರಲು ಧಾವಿಸಿದ ಅಲ್ಲಿದ್ದ ಪೊಲೀಸ್ರು ಮತ್ತು ಸಾರ್ವಜನಿಕರನ್ನು ಪಾತಕಿ ವೆಂಕಟಪತಿ ಚಾಕುವಿನಿಂದ ಬೆದರಿಸಿ ಹತ್ತಿರಕ್ಕೆ ಬಾರದಂತೆ ಎಚ್ಚರಿಸಿದ್ದಾರೆ. ನಂತ್ರ ಗಾಯಾಳು ಚಂದ್ರಮೌಳೇಶ್ವರ ಅವ್ರನ್ನು ಜೀಪಲ್ಲಿ ಕರೆದುಕೊಂಡು ಕಾಮಸಮುದ್ರಂನ ಸರ್ಕಾರಿ ಆಸ್ಪತ್ರೆಗೆ ಬಂದ್ರೆ ವೈದ್ಯರೇ ಇರಲಿಲ್ಲ. ಬಂಗಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಗಾಯಾಳು ಅಧಿಕಾರಿ ಅರೆ ಜೀವವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ಚಂದ್ರಮೌಳೇಶ್ವರ ಅವ್ರನ್ನು ಕರೆತಂದ್ರೂ ಪ್ರಯೋಜನವಾಗದೆ ಅವ್ರು ಕೊನೆಯುಸಿರೆಳೆದ್ರು. ಕಾಮಸಮುದ್ರಂನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಸಿಕ್ಕಿದ್ರೆ ಅಧಿಕಾರಿಯ ಜೀವ ಉಳಿಯುವ ಸಾಧ್ಯತೆಯಿತ್ತು ಅನ್ನೋದು ಅಲ್ಲಿನವ್ರ ಮಾತು. ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ಅಕಾಲಿಕ ಮರಣದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವ್ರ ಆಸ್ಪತ್ರೆಗೆ ಧಾವಿಸಿದರು. ಘಟನೆಯ ಬಗ್ಗೆ ವಿವರಿಸಿದ ಜಿಲ್ಲಾಧಿಕಾರಿಯು, ಮೃತ ತಹಶೀಲ್ದಾರ್ ಅವ್ರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಸಿಎಂ ಅವರು ಮೃತ ಅಧಿಕಾರಿಯ ಕುಟುಂಬಕ್ಕೆ ಘೋಷಿಸಿರುವ ಪರಿಹಾರಗಳ ಬಗ್ಗೆ ವಿವರಿಸಿದ್ರು.
ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವ್ರ ಪಾರ್ಥೀವ ಶರೀರವನ್ನು ದರ್ಶಿಸಿದ ನಂತ್ರ ಸುದ್ದಿಗಾರರ ಜೊತೆಗೆ ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ರು. ಇಂಥಹ ಘಟನೆಯನ್ನು ಇದುವರೆಗೂ ನೋಡಿಲ್ಲ ಅಂತ ಹೇಳಿದ ಸೀಮಂತ್ ಕುಮಾರ್ ಸಿಂಗ್ ಅವ್ರು, ಸ್ಥಳದಲ್ಲಿ ಬಂದೋಬಸ್ತಿಗಿದ್ದ ಪೊಲೀಸ್ರ ಲೋಪದ ಬಗ್ಗೆಯೂ ವರದಿ ಕೇಳಿದ್ದು, ನಂತ್ರ ಕ್ರಮ ಜರುಗಿಸಲಾಗುವುದು ಅಂತ ಹೇಳಿದ್ರು. ಕೊಲೆ ಆರೋಪಿ ವೆಂಕಟಪತಿಗೆ ಯಾವುದೇ ಕ್ರಿಮಿನಲ್ ಹಿನ್ನಲೆಯಿರುವ ಬಗ್ಗೆಯೂ ಸದ್ಯಕ್ಕೆ ಮಾಹಿತಿಯಿಲ್ಲ ಅಂತ ಹೇಳಿದ್ರು.
ಪಾತಕಿ ವೆಂಕಟಪತಿ ಅವ್ರು ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವ್ರಿಗೆ ಚೂರಿ ಹಾಕಿದಾಗ ಸ್ಥಳದಲ್ಲಿದ್ದ ಡ್ರೈವರ್ ನಾರಾಯಣಸ್ವಾಮಿ ಘಟನೆಯನ್ನು ಭಯದಿಂದಲೇ ವಿವರಿಸಿದ್ದಾರೆ. ಚೂರಿ ಇರಿತದಿಂದ ಕೆಳಕ್ಕೆ ಬಿದ್ದ ಚಂದ್ರಮೌಳೇಶ್ವರ ಅವ್ರನ್ನು ತಮ್ಮ ಜೀಪಲ್ಲಿ ಬಂಗಾರಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಗಿ ಡ್ರೈವರ್ ನಾರಾಯಣಸ್ವಾಮಿ ಹೇಳಿದ್ದಾರೆ. ತಮ್ಮ ಉತ್ತಮ ನಡತೆಯಿಂದಾಗಿ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರು ಬಂಗಾರಪೇಟೆಗೆ ಬಂದ ಎರಡು ವರ್ಷದಲ್ಲಿಯೇ ಹೆಸರು ಮಾಡಿದ್ದರು ಅಂತ ಅವ್ರು ಬಿಕ್ಕುತ್ತಾರೆ.
ಮೂಲತಃ ತುಮಕೂರಿನ ಗುಬ್ಬಿ ತಾಲೂಕಿನ ಕದರೇಗೌಡನ ಪಾಳ್ಯದ ಚಂದ್ರಮೌಳೇಶ್ವರ ಅವ್ರು ಬೆಂಗಳೂರಿನ ಕೆ.ಆರ್.ಪುರಂ ಗ್ರೇಡ್ 2 ತಹಸೀಲ್ದಾರ್ ಆಗಿ, ಪ್ರಾದೇಶಿಕ ಆಯುಕ್ತರ ಕಚೇರಿಯ ವಿವಿಧ ವಿಭಾಗಗಳಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದರು. ಎರಡು ವರ್ಷಗಳ ಹಿಂದೆ ಬಂಗಾರಪೇಟೆ ತಹಶೀಲ್ದಾರ್ ಆಗಿ ನೇಮಕವಾಗಿದ್ದ ಚಂದ್ರಮೌಳೇಶ್ವರ ಅವ್ರಿಗೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರನಿದ್ದಾನೆ. ಸರ್ಕಾರಿ ಕರ್ತವ್ಯ ನಿರ್ವಹಿಸುವಾಗ ಇಂಥಹ ಘಟನೆಗಳು ನಡೆದ್ರೆ ಕೆಲಸ ಮಾಡುವುದು ಹೇಗೆ ಅನ್ನುವುದು ಚಂದ್ರಮೌಳೇಶ್ವರ ಅವ್ರ ಸಹದ್ಯೋಗಿಗಳ ಆತಂಕದ ಮಾತಾಗಿದೆ. ಸೌಮ್ಯ ಸ್ವಭಾವದ ಚಂದ್ರಮೌಳೇಶ್ವರ ಅವ್ರಂತೆ ನಾಳೆ ನಮಗೂ ಆದ್ರೇನು ಗತಿ ಅನ್ನೋ ಆತಂಕ ಸಹದ್ಯೋಗಿಗಳದ್ದಾಗಿದ್ದು, ನೌಕರರಿಗೆ ರಕ್ಷಣೆ ಮುಖ್ಯ ಅಂತ ಮನವಿ ಮಾಡಿದ್ದಾರೆ. ತಹಸೀಲ್ದಾರ್ ಹತ್ಯೆಯನ್ನು ಬಂಗಾರಪೇಟೆಯ ಎಂಎಲ್ಎ ನಾರಾಯಣಸ್ವಾಮಿ ಖಂಡಿಸಿದ್ದಾರೆ. ಮೃತನ ಕುಟುಂಬಕ್ಕೆ ಒಂದು ಕೋಟಿ ರುಪಾಯಿ ಪರಿಹಾರ ಕೊಡಬೇಕೆಂದು ಅವ್ರು ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ದುರ್ಮರಣಕ್ಕೆ ಜಿಲ್ಲಾ ಸರ್ಕಾರಿ ನೌಕರರ ಸಂಘವು ಆತಂಕ ವ್ಯಕ್ತಪಡಿಸಿದೆ. ಸರ್ಕಾರಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಭದ್ರತೆಯಿಲ್ಲದೆ ಜೀವ ಕೊಡುವಂತ ಪರಿಸ್ಥಿತಿ ಬಂದಿದೆ ಅಂತ ಸಂಘವು ಹೇಳಿದೆ. ಚಂದ್ರಮೌಳೇಶ್ವರ ಅವ್ರ ಸಾವಿನ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲೆಯಾದ್ಯಂತ ಸರ್ಕಾರಿ ನೌಕರರು ಕೆಲಸವನ್ನು ಸ್ಥಗಿತಗೊಳಿಸುವ ಮೂಲಕ ದಿವಂಗತ ಚಂದ್ರಮೌಳೇಶ್ವರ ಅವ್ರಿಗೆ ಗೌರವ ಸೂಚಿಸಿದ್ರು.
ಬಂಗಾರಪೇಟೆಯ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರನ್ನು ಅಮಾನವೀಯವಾಗಿ ಕೊಂದಿರುವ ಘಟನೆಯನ್ನು ಪೊಲೀಸ್ರು ಗಂಭೀರವಾಗಿ ಪರಿಗಣಿಸಲು ಸಂಸದ ಎಸ್.ಮುನಿಸ್ವಾಮಿ ಸೂಚಿಸಿದ್ದಾರೆ. ಸರ್ಕಾರಿ ನೌಕರರ ರಕ್ಷಣೆಗೆ ಎಲ್ಲ ಹಂತದಲ್ಲಿಯೂ ಪೊಲೀಸ್ರು ಕ್ರಮವನ್ನು ಜರುಗಿಸಬೇಕಾಗಿದೆ ಅಂತ ಅವ್ರು ಹೇಳಿದ್ರು.
ಗುರುವಾರ ಮಧ್ಯರಾತ್ರಿ ಚಂದ್ರಮೌಳೇಶ್ವರ ಮೃತ ದೇಹದ ಶವ ಪರೀಕ್ಷೆ ಮುಗಿದ ನಂತ್ರ ಕುಟುಂಬದವ್ರಿಗೆ ಜಿಲ್ಲಾಡಳಿತ ದೇಹವನ್ನು ಹಸ್ತಾಂತರಿಸಿತು. ಚೌಂದ್ರಮೌಳೇಶ್ವರ ಅವ್ರ ಕುಟುಂಬದವ್ರು ಪಾರ್ಥಿವ ಶರೀರವನ್ನು ತುಮಕೂರಿನ ಗುಬ್ಬಿ ತಾಲೂಕಿನ ಕದರೆಗೌಡನ ಪಾಳ್ಯದಲ್ಲಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ರು. ಚಂದ್ರಮೌಳೇಶ್ವರ ಪಾರ್ಥಿವ ಶರೀರಕ್ಕೆ ಜಿಲ್ಲಾಡಳಿತ ಸಕಲ ಸರ್ಕಾರಿ ಗೌರವಗಳನ್ನ ಸಲ್ಲಿಸಿದ್ರು. ಒಟ್ನಲ್ಲಿ, ಪ್ರಸ್ತುತ ಕೊಲೆ ಆರೋಪಿ ವೆಂಕಟಪತಿ ಹಾಗೂ ಆತನ ಪತ್ನಿಯನ್ನು ಪೊಲೀಸ್ರು ಬಂಧಿಸಿದ್ದಾರೆ. ಈ ಮಧ್ಯೆ, ಸರ್ಕಾರಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ಹಂತದವ್ರಿಗೇ ಈ ಸ್ಥಿತಿ ಬಂದಿರುವ ಬಗ್ಗೆ ಸಾಮಾನ್ಯ ನೌಕರರಲ್ಲಿ ಆತಂಕ ಕಾಡ್ತಿರೋದು ಮಾತ್ರ ಸಹಜ. ಬಳಪ ಹಿಡಿದಿದ್ದ ಮೇಷ್ಟ್ರು ಚಾಕು ಹಿಡಿದಿದ್ದಕ್ಕೆ ಇಷ್ಟೆಲ್ಲಾ ಅನಾಹುತ ಆಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.