ಉಡುಪಿ : ಕೊರೋನಾ ವಕ್ಕರಿಸಿದ ಬಳಿಕ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜ ಎನ್ನುವದನ್ನು ಬ್ರಹಾವ್ಮರ ಸಮುದಾಯ ಆರೋಗ್ಯ ಕೇಂದ್ರ ಸಾಬೀತು ಮಾಡಿದೆ ಎಂದರೆ ತಪ್ಪಾಗಲಾರದು. ಕೊರೋನಾ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಯ ಶವದ ಕೊರೋನಾ ಟೆಸ್ಟ್ ರಿಪೋರ್ಟ್ ಬರುವವರೆಗೆ ಆಸ್ಪತ್ರೆಯವರು ಕೊಳೆಯಲು ಬಿಟ್ಟಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಜುಲೈ ೬ ರಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಣಿಕಟ್ಟು ನಿವಾಸಿ ರುದ್ರ ಎನ್ನುವವರ ಮಗ ಕಾರ್ತಿಕ್ (೧೫) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ತಾಯಿ ರುದ್ರ ಮನೆಗೆಲಸಕ್ಕೆ ಹೋಗುತ್ತಿದ್ದ ಮನೆಯಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ತಾಯಿ ಮತ್ತು ಮಗ ಕಾರ್ತಿಕ ಗೆ ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್ ಹಾಕಲಾಗಿತ್ತು. ಕೊರೋನಾ ವಿಚಾರವಾಗಿ ಮನನೊಂದು ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ಶವದ ದಫನ್ ಮಾಡುವ ಮೊದಲು ಕೊರೋನಾ ಟೆಸ್ಟ್ ಮಾಡುವುದು ಅಗತ್ಯವಾಗಿರುವ ಹಿನ್ನಲೆಯಲ್ಲಿ, ಸ್ಯಾಂಪಲ್ ಪಡೆದು ಶವವನ್ನು ಬ್ರಹ್ಮಾವರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಮಾರ್ಚರಿಯಲ್ಲಿರಿಸಲಾಗಿತ್ತು. ಆದರೆ ಇಂದು ಶವ ಪರೀಕ್ಷೆ ತೆಗೆದಾಗ ಶವದ ಮುಖ ಊದಿಕೊಂಡು ವಾಸನೆ ಬರುತ್ತಿವುದನ್ನು ಗಮನಿಸಿ ಸ್ಥಳೀಯರು ಆಸ್ಪತ್ರೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾರ್ಚರಿಯ ಫ್ರೀಸರ್ ಹಾಳಾಗಿ ಹೀಗೆ ಆಗಿದೆ ಎನ್ನುವ ಸಬೂಬು ಹೇಳಿ ಆಸ್ಪತ್ರೆಯವರು ನುಣುಚಿಕೊಂಡಿದ್ದಾರೆ. ಇತ್ತ ಕಾರ್ತಿಕ ತಾಯಿ ಹೋಂ ಕ್ವಾರಂಟೈನ್ ನಲ್ಲಿರುವ ಹಿನ್ನಲೆಯಲ್ಲಿ ಹೊರಬರಲಾಗದೆ, ಮಗನ ಶವದ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದಾರೆ.