ಉಡುಪಿ : ಉಡುಪಿಯ ಮಲ್ಪೆ ಲಕ್ಷ್ಮೀ ನಗರ ಬೆಳ್ಕಳೆದಲ್ಲಿ ಮೀನುಗಾರಿಕಾ ವೃತ್ತಿ ಮಾಡಿಕೊಂಡಿದ್ದ ಯೋಗೀಶ್(28) ಕೊಲೆ ಪ್ರಕರಣವನ್ನು ಒಂದೆ ದಿನದಲ್ಲಿ ಪೊಲೀಸರು ಭೇಧಿಸಿದ್ದಾರೆ. ಸೋಮವಾರ ತಡ ರಾತ್ರಿ ಯೋಗೀಶ್‌ಗೆ ಚೂರಿ ಇರಿದು ಆರೋಪಿಗಳು ಪರಾರಿಯಾಗಿದ್ದರು. ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವ್ಯವಹಾರದಲ್ಲಿ ನಡೆದಿರಬಹುದಾದ ವಿಚಾರಕ್ಕೆ ಗಲಾಟೆ ನಡೆದು ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ ಐದು ಮಂದಿ ಆರೋಪಿಗಳು ಹತ್ಯೆ ವೇಳೆಯಲ್ಲಿ ಭಾಗಿಯಾಗಿದ್ದರು ಎನ್ನುವ ಮಾಹಿತಿಯನ್ನು ಕೂಡ ಪೊಲೀಸರು ಕಲೆ ಹಾಕಿದ್ದರು. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಮಲ್ಪೆ ಪೊಲೀಸರು ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ, ಸಹೋದರ ರೋಹಿತ್ ಪಿಂಟೋ ಅಣ್ಣು ಯಾನೆ ಪ್ರದೀಪ್, ವಿನಯ್ ರನ್ನು ಬಂಧಿಸಿದ್ದಾರೆ. ಇಂದು ಮುಂಜಾನೆ ಆರೋಪಿಗಳನ್ನು ಕೊಲೆ ನಡೆದ ಸ್ಥಳ ಮಹಜರಿಗೆ ಕರೆ ತರಲಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಮಾರಾಕಾಸ್ತ್ರದಿಂದ ತಿವಿದು ಕೊಲೆ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.