ಹಾಸನ : ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹಳ್ಳಿಯಲ್ಲಿ ಜೀವನ ಸಾಗಿಸುತ್ತಿದ್ದ ಆ ವೃದ್ಧ ದಂಪತಿಗಳ ಮೇಲೆ ವೃದ್ಧೆಯ ಸಹೋದರನ ಕುಟುಂಬವೇ ಹಲ್ಲೆ ಮಾಡಿ ವಿಷ ಕುಡಿಸಿದ ಆರೋಪ ಕೇಳಿಬಂದಿದ್ದು ಘಟನೆಯಲ್ಲಿ ವೃದ್ಧ ಮಹಿಳೆ ಸಾವನ್ನಪ್ಪಿದ್ರೆ ಆಕೆಯ ಪತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೌದು ಹಾಸನ ಜಿಲ್ಲೆಯ ಬೇಲೂರು ತಾ. ಮಾಳೆಗೆರೆ ಗ್ರಾಮದಲ್ಲಿ ಇಂತಹದ್ದೊಂದು ಕ್ರೌರ್ಯ ನಡೆದಿದೆ. ಇದೇ ಗ್ರಾಮದಲ್ಲಿ ವಾಸವಾಗಿರೋ ಮಂಜೇಗೌಡ ಎಂಬಾತ ಘಟನೆಯಲ್ಲಿ ಸಾವನ್ನಪ್ಪಿರೋ ನಂಜಮ್ಮ ಎಂಬುವರ ಸಹೋದರ. ಈತನ ಮಗ ಸಂಪತ್ ಎಂಬಾತ ಕಳೆದ ಒಂದು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದ. ಇದಕ್ಕೆ ತನ್ನ ಸಹೋದರಿ ನಂಜಮ್ಮ ಮಾಡಿಸಿದ ಮಾಟ ಮಂತ್ರವೇ ಕಾರಣ ಎಂದು ತಪ್ಪು ಭಾವನೆಯಿಂದ ಜಗಳ ತೆಗೆಯುತ್ತಿದ್ದನಂತೆ. ಇದಕ್ಕೂ ಮುನ್ನ ಇವರಿಬ್ಬರ ಕುಟುಂಬದ ನಡುವೆ ಆಸ್ತಿ ಹಂಚಿಕೆಗೆ ಜಗಳ ಕೂಡ ನಡೆದಿತ್ತಂತೆ. ಜಮೀನು ವ್ಯಾಜ್ಯದಿಂದ ನನ್ನ ಮಗನ ಮೇಲೆ ಮಾಟ ಮಂತ್ರ ಮಾಡಿಸಿದ್ದಾರೆ ಎಂಬುದು ಮಂಜೇಗೌಡ ಕುಟುಂಬದ ನಂಬಿಕೆ.
ಇದನ್ನೂ ಓದಿ:ಮಾಟ-ಮಂತ್ರಕ್ಕೆ ಮಗನ ಸಾ*ವು: ಸ್ವಂತ ಸಹೋದರಿಗೆ ಬಲವಂತವಾಗಿ ವಿಷ ಕುಡಿಸಿದ ಅಣ್ಣ
ಫೆಬ್ರವರಿ 2 ರಂದು ಮನೆಬಳಿ ಹಲ್ಲೆ ನಡೆಸಿ ಬಲವಂತವಾಗಿ ವಿಷ ಕುಡಿಸಿದ್ದಾರೆ ಇದರಿಂದ ನಂಜಮ್ಮ ಮತ್ತು ಅವರ ಶಂಕರೇಗೌಡ ಅಸ್ವಸ್ಥರಾಗಿ ಹಾಸನದ ಹಿಮ್ಸ್ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಿಸದೇ ನಂಜಮ್ಮ ಇಂದು ಸಾವನಪ್ಪಿದ್ದಾರೆ. ಬಲವಂತವಾಗಿ ವಿಷಕುಡಿಸಿದ ಬಗ್ಗೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಮಂಜೇಗೌಡ ಕುಟುಂಬಸ್ಥರಾದ ನಂಜಮ್ಮಗೆ ಮಂಜೇಗೌಡ, ನೀಲಮ್ಮ, ಸಾವಿತ್ರಮ್ಮ,ಮಧು ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಒಟ್ಟಾರೆ ಹಲವು ವರ್ಷಗಳಿಂದ ಜಮೀನು ವ್ಯಾಜ್ಯಕ್ಕೆ ಸಂಘರ್ಷ ನಡೆಯುತ್ತಿದ್ದ ಕುಟುಂಬಗಳ ಜಗಳದ ನಡುವೆ ಮಗನ ಸಾವಿಗೆ ಮಾಟ ಮಂತ್ರವೇ ಕಾರಣ ಎಂದು ಈ ರೀತಿ ವೃದ್ಧರಿಗೆ ವಿಷವುಣಿಸಿದ್ದಾರೆ ಎಂಬ ಆರೋಪ ಮಂಜೇಗೌಡ ಕುಟುಂಬದ ವಿರುದ್ಧ ಕೇಳಿ ಬಂದಿದ್ದು ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ಹೊರಬೀಳಬೇಕಿದೆ.